ಶ್ರೀರಂಗಪಟ್ಟಣ ಎಂಎಲ್ಎ ರವೀಂದ್ರಗೆ ತಹಶೀಲ್ದಾರ್ ರೂಪಾ ಕ್ಲಾಸ್; ವೇದಿಕೆಯಲ್ಲೇ ನಾಯಕರ ಜಟಾಪಟಿ, ವಿಡಿಯೊ ವೈರಲ್
ತಹಶೀಲ್ದಾರ್ ರೂಪಾ ಕಡೆಗೆ ಶ್ರೀಕಂಠಯ್ಯ ಬಿರುಸಾಗಿ ನುಗ್ಗಲು ಯತ್ನಿಸಿದ್ದು ಅಲ್ಲೇ ಇದ್ದ ಸಚಿವ ನಾರಾಯಣಗೌಡಗೆ ಸರಿಕಾಣಲಿಲ್ಲ. ‘ಹೊಡೀತೀರೇನ್ರೀ, ಹೊಡೀರಿ’ ಎನ್ನುತ್ತಾ ನಾರಾಯಣಗೌಡ ಸಹ ತಾಳ್ಮೆ ಕಳೆದುಕೊಂಡು ಶ್ರೀಕಂಠಯ್ಯ ಕಡೆ ಕೂಗಾಡಿದರು.
ಮಂಡ್ಯ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಸಚಿವ ಕೆ.ಸಿ.ನಾರಾಯಣಗೌಡ ನಡುವೆ ವೇದಿಕೆಯಲ್ಲೇ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಜಟಾಪಟಿ ನಡೆದ ಘಟನೆ ಶನಿವಾರ ನಡೆದಿದೆ. ಹಕ್ಕುಪುತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು, ಪತ್ರಕರ್ತರು, ಪೊಲೀಸರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಜಗಳಕ್ಕೆ ಸಾಕ್ಷಿಯಾದರು. ಉದ್ವಿಗ್ನರಾಗಿದ್ದ ಶಾಸಕ-ಸಚಿವರನ್ನು ಶಾಂತಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಈ ವೇಳೆ ಶ್ರೀಕಂಠಯ್ಯ ಪೊಲೀಸರ ವಿರುದ್ಧವೂ ಹರಿಹಾಯ್ದರು. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಹಲವು ವಾಟ್ಸ್ಯಾಪ್ ಗ್ರೂಪ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ತಹಶೀಲ್ದಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ನಿಯಮಿತವಾಗಿ ಕಂದಾಯ ಅದಾಲತ್ ನಡೆಸುತ್ತಿಲ್ಲ, ಜನರನ್ನು ಅಲೆದಾಡಿಸುತ್ತಿದ್ದೀರಿ ಎಂದು ದೂರಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ತಹಶೀಲ್ದಾರ್ ರೂಪಾ, ‘ನಾವು ಪ್ರತಿದಿನ ಅದಾಲತ್ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು. ಅಧಿಕಾರಿಯ ಸಮರ್ಥನೆಯನ್ನು ತನಗೆ ಎದುರು ಮಾತನಾಡಿದ್ದು ಎಂದುಕೊಂಡ ರವೀಂದ್ರ ಶ್ರೀಕಂಠಯ್ಯ ತಾಳ್ಮೆ ಕಳೆದುಕೊಂಡು ವಾಗ್ವಾದಕ್ಕಿಳಿದರು.
ರೂಪಾ ಸಹ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಿದರು. ಒಂದು ಹಂತದಲ್ಲಿ ತಹಶೀಲ್ದಾರ್ ರೂಪಾ ಕಡೆಗೆ ಶ್ರೀಕಂಠಯ್ಯ ಬಿರುಸಾಗಿ ನುಗ್ಗಲು ಯತ್ನಿಸಿದ್ದು ಅಲ್ಲೇ ಇದ್ದ ಸಚಿವ ನಾರಾಯಣಗೌಡಗೆ ಸರಿಕಾಣಲಿಲ್ಲ. ‘ಹೊಡೀತೀರೇನ್ರೀ, ಹೊಡೀರಿ’ ಎನ್ನುತ್ತಾ ನಾರಾಯಣಗೌಡ ಸಹ ತಾಳ್ಮೆ ಕಳೆದುಕೊಂಡು ಶ್ರೀಕಂಠಯ್ಯ ಕಡೆ ಕೂಗಾಡಿದರು. ರವೀಂದ್ರ ಶ್ರೀಕಂಠಯ್ಯ, ನಾರಾಯಣಗೌಡ ನಡುವೆ ವಾಕ್ಸಮರ ತೀವ್ರಗೊಂಡು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ಸಚಿವರು, ಶಾಸಕರನ್ನು ಅಲ್ಲಿಯೇ ಇದ್ದ ಇತರ ಜನಪ್ರತಿನಿಧಿಗಳು ಸಮಾಧಾನಪಡಿಸಿದರು. ಮಫ್ತಿಯಲ್ಲಿದ್ದ ಪೊಲೀಸರು ತಹಶೀಲ್ದಾರ್ ರೂಪಾ ಅವರನ್ನು ಸುತ್ತುವರಿದು ನಿಂತು ರಕ್ಷಣೆ ನೀಡಿದರು.
ಆಗಿದ್ದೇನು? ಸಾರ್ವಜನಿಕ ಸಮಾರಂಭದಲ್ಲಿ ಶ್ರೀಕಂಠಯ್ಯ ಮಾತನಾಡುವಾಗ ತಹಶೀಲ್ದಾರ್ ರೂಪಾ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನೇರ ಆರೋಪ ಮಾಡಿದರು. ಈ ಆರೋಪಕ್ಕೆ ರೂಪಾ ಸೆಡ್ಡು ಹೊಡೆದು ನಿಂತರು. ಬಹುಶಃ ಶ್ರೀಕಂಠಯ್ಯ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಕಾಣಿಸುತ್ತದೆ. ಅವರು ಅವಾಕ್ಕಾದರು ಮತ್ತು ವಿಪರೀತ ಸಿಟ್ಟಾದರು. ‘ನಾನು ಎಲ್ಲ ಡಾಕ್ಯುಮೆಂಟ್ ಸೋಮವಾರ ಬಯಲಿಗಿಡ್ತೀನಿ’ ಎಂದು ಶ್ರೀಕಂಠಯ್ಯ ದನಿ ಎತ್ತರಿಸಿ ಮಾತನಾಡಿದರು. ‘ನಾನು ಮಾಡಿರುವ ಕೆಲಸದ ಬಗ್ಗೆ ನಾನೂ ದಾಖಲೆ ಕೊಡ್ತೀನಿ’ ಅಂತ ರೂಪಾ ಸಹ ಅಷ್ಟೇ ಬಿರುಸಾಗಿ ಉತ್ತರಿಸಿದರು.
ಸಚಿವ ನಾರಾಯಣಗೌಡ ತಹಶೀಲ್ದಾರ್ಗೆ ಸುಮ್ಮನಿರಿ ಅಂದಾಗ, ‘ಸರ್, ಐ ಡೋಂಟ್ ಅಕ್ಸೆಪ್ಟ್ ದಿಸ್’ ಎಂದು ರೂಪಾ ಶ್ರೀಕಂಠಯ್ಯಗೆ ಪ್ರತಿ ನುಡಿದರು. ನಾನು ತಾಲ್ಲೂಕಿಗೆ ಬಂದ ನಂತರ ಸಾವಿರಾರು ಕಡತಗಳನ್ನು ವಿಲೇವಾರಿ ಮಾಡಿದ್ದೇನೆ. ಎಂದು ರೂಪಾ ಸಮರ್ಥಿಸಿಕೊಂಡರು. ‘ನೀನು ಜನರನ್ನು ಅಲೆಸ್ತಾ ಇದ್ದೀಯಾ’ ಎಂದು ರವೀಂದ್ರ ಏಕವಚನದಲ್ಲಿ ವಾಗ್ದಾಳಿಗಿಳಿದರು. ಆಗ ರೂಪಾ ಮತ್ತೊಮ್ಮೆ ‘ಐ ಡೋಂಟ್ ಅಕ್ಸೆಪ್ಟ್ ದಿಸ್’ ಎಂದು ತಿರುಗೇಟು ನೀಡಿದರು.
‘ನಿಮ್ಮ ಹತ್ತಿರ ವಾದ ಮಾಡೋ ಅವಶ್ಯಕತೆ ಇಲ್ಲ, ಸಾರ್ವಜನಿಕರ ಕೆಲಸ ಮಾಡೋ ಯೋಗ್ಯತೆ ಇಲ್ಲದಿದ್ರೆ ಮನೆಗೆ ಹೋಗ್ರೀ. ಏಯ್, ಕುತ್ಕೋಳೇ ಅಮ್ಮ ಸಾಕು’ ಅಂತ ಕೂಗಾಡಿ ತಹಶೀಲ್ದಾರ್ರತ್ತ ಮುನ್ನುಗ್ಗಿದರು. ಆಗ ಸಚಿವ ನಾರಾಯಣಗೌಡ ಮಧ್ಯಪ್ರವೇಶಿಸಿ, ‘ಹೊಡೀತೀರೇನ್ರೀ, ಗವರ್ನಮೆಂಟ್ ಎಂಪ್ಲಾಯಿ ಅವ್ರು. ಹೊಡೀರಿ’ ಅಂತ ದನಿ ಏರಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದವರೂ ಕೂಗಾಡುತ್ತಾ ವೇದಿಕೆಯ ಹತ್ತಿರಕ್ಕೆ ಹೋದಾಗ ಪೊಲೀಸರು ಜನರನ್ನು ದೂರ ಕಳಿಸಿದರು.
(Mla Ravindra Srikantaiah Minister KC Narayana Gowda clash on stage in Srirangapatna)
ಇದನ್ನೂ ಓದಿ: ಭದ್ರಾವತಿ ಕಬಡ್ಡಿ ಗಲಾಟೆ ಪ್ರಕರಣ: ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ಗೆ ಜಾಮೀನು
ಇದನ್ನೂ ಓದಿ: ಮಸ್ಕಿ ಉಪಚುನಾವಣಾ ಪ್ರಚಾರದ ವೇಳೆ ಮಿರ್ಚಿ ಕರಿದ ಶಾಸಕ ರೇಣುಕಾಚಾರ್ಯ
Published On - 10:35 pm, Sat, 17 April 21