ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್ ಔಷಧದ ಲಭ್ಯತೆ ಕರ್ನಾಟಕದಲ್ಲಿ ಅಗತ್ಯ ಪ್ರಮಾಣದಲ್ಲಿದೆ. ಔಷಧದ ಕೊರತೆ ಇಲ್ಲ ಎಂದು ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ಹೈಕೋರ್ಟ್ಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 35,821 ಡೋಸ್ಗಳ ಲಭ್ಯತೆ ಇದೆ. ಖಾಸಗಿ ಸ್ಟಾಕಿಸ್ಟ್ಗಳ ಬಳಿ 15,000 ಡೋಸ್ ಲಭ್ಯವಿದೆ. 70 ಸಾವಿರ ರೆಮ್‌ಡಿಸಿವಿರ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೆಮ್ಡಿಸಿವಿರ್ಗೆ ಪರ್ಯಾಯ ಔಷಧವೂ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ನೋಡೆಲ್ ಅಧಿಕಾರಿ ನೇಮಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಆಮ್ಲಜನಕ ಕೊರತೆಯಾದ ವರದಿ ಇಲ್ಲ ಎಂದು ತಿಳಿಸಿರುವ ಅವರು, 270 ಆ್ಯಂಬುಲೆನ್ಸ್ ಲಭ್ಯವಿರುವುದಾಗಿ ಹೇಳಿಕೆ ನೀಡಿದ್ದಾರೆ.
ಸಂಕಷ್ಟ ಸ್ಥಿತಿ ಅನುಭವಿಸುತ್ತಿರುವ ಜನರಿಗೆ ಸ್ಪಂದಿಸಲು ಗಣ್ಯರ ಸಮಿತಿ ರಚಿಸಲು ಸೂಚನೆ ನೀಡಲಾಗಿದೆ. ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಧಾರ್ಮಿಕ, ರಾಜಕೀಯ ಸಭೆಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿದೆ. ಚುನಾವಣೆ ಫಲಿತಾಂಶದ ವೇಳೆ ಜನ ಸೇರದಂತೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ ಔಷಧಿಯ ದರ ಕಡಿತ ರಾಜ್ಯದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ₹ 899ಕ್ಕೆ ಸಿಗಲಿದೆ. ಕಂಪನಿಗಳು ಇಂಜೆಕ್ಷನ್ ದರವನ್ನು ಕಡಿಮೆ ಮಾಡಿವೆ ಎಂದು ಪ್ರಕಟಣೆ ತಿಳಿಸಿದೆ. ರೆಮಿಡಿಸಿವರ್ ಇಂಜೆಕ್ಷನ್ ಬೆಲೆಯನ್ನು ಕಂಪನಿಗಳು ಸ್ವಪ್ರೇರಣೆಯಿಂದ ಇಳಿಸಿವೆ.
ಕ್ಯಾಡಿಲಾ ಹೆಲ್ತ್‌ಕೇರ್ ಕಂಪನಿಯು ರೆಮಿಡಿಸಿವರ್ ಇಂಜೆಕ್ಷನ್ ಬೆಲೆಯನ್ನು 2,800 ರೂಪಾಯಿಯಿಂದ 8,99 ರೂಪಾಯಿಗೆ ಇಳಿಸಿದೆ. ಬಯೋಕಾನ್ ಕಂಪನಿ ರೆಮಿಡಿಸಿವರ್ ಇಂಜೆಕ್ಷನ್ ಬೆಲೆ 3,950 ರೂಪಾಯಿಯಿಂದ 2,450 ರೂಪಾಯಿಗೆ ಇಳಿಸಿದೆ. ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿಯ ರೆಮಿಡಿಸಿವರ್ ಇಂಜೆಕ್ಷನ್ ಬೆಲೆ 5,400 ರೂಪಾಯಿಯಿಂದ 2,700 ರೂಪಾಯಿಗೆ ಇಳಿಕೆ. ಸಿಪ್ಲಾ ಕಂಪನಿಯಿಂದ 4,000 ರೂಪಾಯಿಯಿಂದ 3,000 ರೂಪಾಯಿಗೆ ಇಳಿಕೆ. ಮೈಲಾನ್ ಫಾರ್ಮಾಸೂಟಿಕಲ್ಸ್ ನಿಂದ 4,800 ರೂಪಾಯಿಯಿಂದ 3,400 ರೂಪಾಯಿಗೆ ಇಳಿಕೆ. ಜ್ಯುಬಿಲೆಂಟ್ ಜೆನೆರಿಕ್ಸ್ನಿಂದ 4,700 ರೂಪಾಯಿಯಿಂದ 3,400 ರೂಪಾಯಿಗೆ ಇಳಿಕೆ. ಹೆಟೆರೋ ಹೆಲ್ತ್‌ಕೇರ್ ಕಂಪನಿಯಿಂದ 5,400 ರೂಪಾಯಿಯಿಂದ 3,490 ರೂಪಾಯಿಗೆ ಇಳಿಕೆ.
ಕೇಂದ್ರದ ಫಾರ್ಮಾಸೂಟಿಕಲ್ಸ್ ಇಲಾಖೆಯ ಮಧ್ಯಪ್ರವೇಶದ ಬಳಿಕ ಕಂಪನಿಗಳಿಂದ ಬೆಲೆ ಇಳಿಕೆ. ಕೊರೊನಾ ರೋಗಿಗಳ ಚಿಕಿತ್ಸೆಗೆ ರೆಮಿಡಿಸಿವರ್ ಇಂಜೆಕ್ಷನ್ ಬಳಸಲಾಗುತ್ತದೆ. ಸದ್ಯಕ್ಕೆ ರೆಮಿಡಿಸಿವರ್ ಇಂಜೆಕ್ಷನ್ ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಕಂಪನಿಗಳು ರೆಮಿಡಿಸಿವರ್ ಇಂಜೆಕ್ಷನ್ ಉತ್ಪಾದನೆ ಹೆಚ್ಚಿಸುವುದಾಗಿ ಹೇಳಿವೆ.
(Karnataka Has Sufficient Supply of Remdesivir govt informs High Court)
ಇದನ್ನೂ ಓದಿ: ಕಲಬುರಗಿಯಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸಿಗ್ತಾಯಿಲ್ಲಾ.. ಸೋಂಕಿತರ ಅಳಲು; ಆದ್ರೆ ಇದು ಸತ್ಯಕ್ಕೆ ದೂರ ಎಂದ ಸಚಿವರು