ಬೆಂಗಳೂರು, ನವೆಂಬರ್ 28: ನಿಗಮ ಮಂಡಳಿಗೆ ನೇಮಕ (Corporation Board Appointment) ಸಂಬಂಧ ಕೇಂದ್ರ ನಾಯಕರಿಗೆ ಪಟ್ಟಿ ರವಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮಂಗಳವಾರ ಸಂಜೆ ತಿಳಿಸಿದರು. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ಪಟ್ಟಿ ಕಳುಹಿಸಲಾಗಿದೆ. ಹೈಕಮಾಂಡ್ ಅನುಮತಿ ನೀಡಿದ ನಂತರ ನೇಮಕಾತಿ ಮಾಡುತ್ತೇವೆ ಎಂದರು.
ನಿಗಮ ಮಂಡಳಿ ನೇಮಕಾತಿಯಲ್ಲಿ ಮೊದಲ ಹಂತದಲ್ಲಿ ಶಾಸಕರಿಗೆ ಅವಕಾಶ ನೀಡಲಾಗುವುದು. 2 ಹಾಗೂ 3ನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕಾರ್ಯಕರ್ತರು ಮತ್ತು ಶಾಸಕರಿಗೆ ಅವಕಾಶ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಪೈಪೋಟಿ ನಡೆದಿತ್ತು. ಪರಿಣಾಮವಾಗಿ ಹಲವು ಸುತ್ತುಗಳ ಸಭೆಯ ನಂತರವೂ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಪಕ್ಷದ ಉನ್ನತ ನಾಯಕರು ವಿಫಲರಾಗಿದ್ದರು.
ಈ ಹಿಂದೆ ನವೆಂಬರ್ 21ರಂದು ಬೆಂಗಳೂರಿಗೆ ಆಗಮಿಸಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಸಿಎಂ, ಡಿಸಿಎಂ ಹಾಗೂ ಇತರ ನಾಯಕರ ಜತೆ ದೀರ್ಘ ಸಭೆ ನಡೆಸಿದ್ದರು. ಅಷ್ಟೇ ಅಲ್ಲದೆ, ಸಂಭಾವ್ಯರ ಪಟ್ಟಿ ಕೂಡ ಸಿದ್ಧಪಡಿಸಲಾಗಿತ್ತು. ಸಭೆಯ ನಡುವೆಯೇ ಸುರ್ಜೇವಾಲ ಅವರು ಶಾಸಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಪಟ್ಟಿ ಪ್ರಕಟಿಸಿದ ನಂತರ ತಕರಾರು ಮಾಡಬಾರದು ಎಂದು ಸೂಚನೆ ಕೊಟ್ಟಿದ್ದರು. ಅಲ್ಲದೆ, ಕೊಟ್ಟ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದರು. ಇಷ್ಟೆಲ್ಲ ಆದ ಬಳಿಕವೂ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ‘ಕೈ’ ನಾಯಕರು ವಿಫಲರಾಗಿದ್ದರು.
ಇದನ್ನೂ ಓದಿ: ಸರ್ಕಾರಕ್ಕೆ ಮತ್ತೆ ತಲೆನೋವಾದ ಬಿಆರ್ ಪಾಟೀಲ್; ರಾಜೀನಾಮೆ ಬಗ್ಗೆ ಉಲ್ಲೇಖಿಸಿ ಸಿಎಂಗೆ ಪತ್ರ
ಕಳೆದ ಬಾರಿಯ ಸಭೆ ವಿಫಲವಾದ ಕಾರಣ ಮತ್ತೆ ಇಂದು (ನವೆಂಬರ್ 28) ಬೆಂಗಳೂರಿಗೆ ಬಂದಿರುವ ಸುರ್ಜೇವಾಲ ಜತೆ ಸಿಎಂ ಹಾಗೂ ಇತರರು ಸಭೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 pm, Tue, 28 November 23