ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಿದ ಕೋವಿಡ್-19 ಸೋಂಕಿತರ ಸಂಖ್ಯೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2021 | 1:51 AM

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 35 ಜನ ಬಲಿಯಾಗಿದ್ದಾರೆ ಮತ್ತು ಪಿಡುಗಿಗೆ ಇದುವರೆಗೆ ಸತ್ತವರ ಸಂಖ್ಯೆ 36,491ಕ್ಕೇರಿದೆ. ಹಾಗೆಯೇ, ಇದುವರೆಗೆ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 29ಲಕ್ಷದ ಗಡಿ ದಾಟಿದೆ ಎಂದು ಪ್ರಕಟಣೆ ತಿಳಿಸುತ್ತದೆ.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಗಣನೀಯವಾಗಿ ಹೆಚ್ಚಿದ ಕೋವಿಡ್-19 ಸೋಂಕಿತರ ಸಂಖ್ಯೆ!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ಮತ್ತು ಬೆಂಗಳೂರಿಗೆ ಪುನಃ ಕೋವಿಡ್-19 ಕಂಟಕ ಎದುರಾಗುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಗುರುವಾರ 2,052 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬುಧವಾರದ 1,531 ಪ್ರಕರಣಗಳಿಗೆ ಹೋಲಿಸಿದರೆ ಸೋಂಕಿತರ ಪ್ರಮಾಣದಲ್ಲಿ ಶೇಕಡಾ 34 ರಷ್ಟು ಹೆಚ್ಚಳವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 376 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದರೆ ಗುರುವಾರ 505 ಪ್ರಕರಣಗಳು ವರದಿಯಾಗಿವೆ. ಇಲ್ಲೂ ಸೋಂಕಿತರ ಪ್ರಮಾಣದಲ್ಲಿ ಶೇಕಡಾ 34 ರಷ್ಟು ಹೆಚ್ಚಳ ಕಂಡು ಬಂದಿದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈಗ ಒಟ್ಟು 23,253 ಸಕ್ರಿಯ ಪ್ರಕರಣಗಳಿವೆ. ಗುರುವಾರದಂದು 1,48,861 ಟೆಸ್ಟ್​ಗಳನ್ನು ಮಾಡಲಾಗಿದ್ದು ರಾಜ್ಯದ ಪಾಸಿಟಿವಿಟಿ ದರ ಶೇಕಡಾ 1.37 ಇದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 35 ಜನ ಬಲಿಯಾಗಿದ್ದಾರೆ ಮತ್ತು ಪಿಡುಗಿಗೆ ಇದುವರೆಗೆ ಸತ್ತವರ ಸಂಖ್ಯೆ 36,491ಕ್ಕೇರಿದೆ. ಹಾಗೆಯೇ, ಇದುವರೆಗೆ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 29ಲಕ್ಷದ ಗಡಿ ದಾಟಿದೆ ಎಂದು ಪ್ರಕಟಣೆ ತಿಳಿಸುತ್ತದೆ.

ಗುರುವಾರ ಮಧ್ಯಾಹ್ನದವರೆಗೆ ರಾಜ್ಯದಾದ್ಯಂತ 1,00.224 ಜನರಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ಲಸಿಕೆ ಪಡೆದವರ ಸಂಖ್ಯೆ ಮೂರು ಕೋಟಿಯನ್ನು (2,97,01,032) ಸಮೀಸುತ್ತಿದೆ.
ಸೋಂಕಿತರಿಗೆ ಆಸ್ಪತ್ರೆ, ಬೆಡ್, ಆಕ್ಸಿಜನ್ ಮತ್ತು ಔಷಧಿಯೂ ದೊರಕಷ್ಟು ಭೀಕರವಾಗಿದ್ದ ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ತಗ್ಗಿಸಲು ಸರ್ಕಾರ ಕಟ್ಟುನಿಟ್ಟಿನ ಲಾಕ್​ಡೌನ್ ಮತ್ತು ಬಿಗಿ ನಿಯಮಗಳನ್ನು ಜಾರಿಗೊಳಿಸಿತ್ತು.

ಆದರೆ ಸೋಂಕಿನ ಪ್ರಕರಣಗಳು ಕಡಿಮೆಗೊಳ್ಳುತ್ತಿದ್ದಂತೆ, ಲಾಕ್​ಡೌನ್ ಮತ್ತು ಇತರ ನಿಷೇಧಗಳನ್ನು ಕ್ರಮೇಣವಾಗಿ ತೆರವುಗೊಳಿಸಲಾಗಿತ್ತು. ಜನರು ಮಾಸ್ಕ್​ ಧರಿಸದಿರುವುದು ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳದಿರುವುದು ಸೋಂಕು ಹೆಚ್ಚಲು ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.

ಜುಲೈ 19ರಿಂದ ಸರಕಾರವು ಸಿನಿಮಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿತು ಮತ್ತು ರಾತ್ರಿ ಕರ್ಫ್ಯೂ ಅನ್ನು ಒಂದು ಗಂಟೆ ಕಡಿಮೆ ಮಾಡಿತು. ಜುಲೈ 26 ರಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ತೆರೆದು ತರಗತಿಗಳನ್ನು ನಡೆಸುವ ಅನುಮತಿಯನ್ನು ಸಹ ಸರ್ಕಾರ ನೀಡಿತು.

ಬೆಂಗಳೂರು ನಗರದಲ್ಲೂ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಪೀಕ್ ಅವರ್​ಗಳಲ್ಲಿ ಎಂದಿನಂತೆ ಟ್ರಾಫಿಕ್ ಜಾಮ್​ಗಳಾಗುತ್ತಿವೆ. ಬಸ್ಸು ಮತ್ತು ಟ್ರೇನ್​ಗಳಲ್ಲಿ ಪೂರ್ಣ ಸಾಮರ್ಥ್ಯದಷ್ಟು ಪ್ರಯಾಣಿಕರನ್ನು ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪೂಜೆ-ಪ್ರಾರ್ಥನೆ ನಡೆಯುವ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಸಹ ನಡೆಯುತ್ತಿವೆ,

ಏತನ್ಮಧ್ಯೆ, ರಾಜ್ಯದ ರಾಜಕಾರಣದಲ್ಲೂ ಮಹತ್ವದ ಬದಲಾವಣೆ ಆಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿದ ಹಿರಿಯ ರಾಜಕಾರಣಿ ಬಿಎಸ್​ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದು ಅವರ ಸ್ಥಾನದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಬೊಮ್ಮಾಯಿ ಅವರು, ಕೋವಿಡ್​ ಮತ್ತು ರಾಜ್ಯದ ಹಲವಾರು ಭಾಗಗಳಲ್ಲಿ ತಲೆದೋರಿರುವ ಪ್ರವಾಹ ಸ್ಥಿತಿಯ ನಿಯಂತ್ರಣ ತಮ್ಮ ಮೊದಲ ಆದ್ಯತೆಗಳಾಗಲಿವೆ ಎಂದು ಹೇಳಿದ್ದರು.

ಇದನ್ನೂ ಓದಿ: Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ