
ದಾವಣಗೆರೆ, ಅಕ್ಟೋಬರ್ 11: ದಾವಣಗೆರೆ ಸೈಬರ್ ಕ್ರೈಂ (Cyber Crime) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದೇಶದ ವಿವಿಧ ಭಾಗಗಳ ಬ್ಯಾಂಕ್ ಖಾತೆಗಳಿಂದ ಕೋಟಿ ಕೋಟಿ ಹಣ ಕಳವು ಮಾಡುತ್ತಿದ್ದ ಸೈಬರ್ ವಂಚಕರ ಬಂಧನವಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು 150 ಕೋಟಿ ರೂಪಾಯಿ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ಮೂವರು ಆರೋಪಿಗಳಲ್ಲಿ ಒಬ್ಬ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆದಾರ ಪ್ರಮೋದ್ ಎಚ್.ಎನ್. ಅವರ ಖಾತೆಯಿಂದ ₹52,60,523 ಹಣ ನಾಪತ್ತೆಯಾಗಿದ್ದ ಪರಿಣಾಮ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೂವರು ಆರೋಪಿಗಳಲ್ಲಿ ಇಬ್ಬರಿಗಾಗಿ ಇನ್ನೂ ಪೊಲೀಸರು ಹುಡುಕುತ್ತಿದ್ದು, ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸೈಯದ್ ಅರ್ಫಾತ್ (28) ಎಂದು ಗುರುತಿಸಲಾಗಿದ್ದು, ಈತ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಶಾಂತಿನಗರ ನಿವಾಸಿ ಎಂದು ತಿಳಿದುಬಂದಿದೆ.
ಜುಲೈ 27ರಿಂದ ಆಗಸ್ಟ್ 19ರವರೆಗೆ ಆರೋಪಿಯ ಖಾತೆಯಲ್ಲಿ ಸುಮಾರು 150 ಕೋಟಿ ರೂಪಾಯಿ ವಂಚನೆಯ ಹಣ ಠೇವಣಿಯಾಗಿದೆ. ಅದರಲ್ಲಿ 132 ಕೋಟಿ ರೂಪಾಯಿ ವಿತ್‌ಡ್ರಾ ಮಾಡಲಾಗಿದೆ. ಉಳಿದ 18 ಕೋಟಿ ರೂಪಾಯಿ ಪೊಲೀಸರು ಫ್ರೀಜ್ ಮಾಡಿದ್ದಾರೆ.
ಆರೋಪಿಯು ಉತ್ತರ ಪ್ರದೇಶದ ಗಾಜೀಯಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರಪ್ರದೇಶದ ಏಲೂರು, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು ಹಾಗೂ ದಾವಣಗೆರೆ ಸೇರಿದಂತೆ ಹಲವು ರಾಜ್ಯಗಳ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪತ್ತೆಯಾಗಿದೆ. ಈ ದೊಡ್ಡ ಪ್ರಮಾಣದ ಸೈಬರ್ ವಂಚನೆ ಪ್ರಕರಣವನ್ನು ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ತಂಡ ಪತ್ತೆಹಚ್ಚಿ ಬಂಧಿಸಿದೆ.
ಇದನ್ನೂ ಓದಿ ಪಾರ್ಟ್ಟೈಮ್ ಕೆಲಸದ ಆಫರ್ ನಂಬಿ 67 ಲಕ್ಷ ರೂ. ಕಳೆದುಕೊಂಡ ಬೆಂಗಳೂರು ಉದ್ಯೋಗಿ
ದಾವಣಗೆರೆ ಸೈಬರ್ ಕ್ರೈಮ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.ದಾವಣಗೆರೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಸೈಬರ್ ಕ್ರೈಮ್ ಪೊಲೀಸರ ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ