
ಮಂಗಳೂರು, ಮೇ 12: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂಬ ಚಿನ್ನಯ್ಯ ಆರೋಪ ಹಿನ್ನೆಲೆ ಒಟ್ಟು 17 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದುರ್ದೈವ ಅಂದರೆ ಇದು ನಡೆದು 10 ತಿಂಗಳಾದರೂ ಉತ್ಖನನ ಕೆಲಸ ಮಾಡಿದ್ದ ಕಾರ್ಮಿಕರಿಗೆ ಕೂಲಿ ಮತ್ತು ಯಂತ್ರೋಪಕರಣಗಳ ಬಾಡಿಗೆ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ (SIT) ಸೂಚನೆಯಂತೆ ಅಹೋರಾತ್ರಿ ದುಡಿದರೂ ಬಿಲ್ ಪಾವತಿಗೆ ಮೀನಾಮೇಷ ಎಣಿಸಲಾಗುತ್ತಿದ್ದು, ಎರಡು ಲಕ್ಷಕ್ಕೂ ಅಧಿಕ ಮೊತ್ತ ಬಾಕಿ ಇದೆ ಎನ್ನಲಾಗಿದೆ.
2025ರ ಜುಲೈ 29ರಿಂದ ಆಗಸ್ಟ್ 13ರವರೆಗೆ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆದಿದ್ದು, ಈ ವೇಳೆ ಕೂಲಿಯಾಳುಗಳು ಮಳೆ-ಬಿಸಿಲಿಗೆ ಮೈಯೊಡ್ಡಿ ದುಡಿದಿದ್ದರು. ಹೀಗಿದ್ದರೂ ಜೆಸಿಬಿ ಬಾಡಿಗೆಯ 71,500 ರೂ. ಮತ್ತು ಕಾರ್ಮಿಕರ ಕೂಲಿ ಮೊತ್ತ 80,000 ಸೇರಿದಂತೆ ಒಟ್ಟು 2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ಹಾಗೂ ವಾಹನಗಳ ಬಾಡಿಗೆ ಹಣಕ್ಕಾಗಿ ಮಾಲೀಕರು ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಮೇಜರ್ ಟ್ವಿಸ್ಟ್; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!
ಇನ್ನು ಬಿಲ್ ಪಾವತಿ ವಿಚಾರವಾಗಿ ಪಂಚಾಯತ್ ಮತ್ತು ಎಸ್‌ಐಟಿ ನಡುವೆಯೇ ಗೊಂದಲ ಇದೆ ಎನ್ನಲಾಗಿದೆ. ಬಾಕಿ ಹಣದ ಬಗ್ಗೆ ವಿಚಾರಿಸಿದರೆ ಧರ್ಮಸ್ಥಳ ಗ್ರಾಮ ಪಂಚಾಯತ್ ಎಸ್ಐಟಿಯತ್ತ ಬೆರಳು ತೋರಿಸಿ ನುಣುಚಿ ಕೊಳ್ಳುತ್ತಿದೆ. ಇತ್ತ SIT ಅಧಿಕಾರಿಗಳನ್ನು ವಿಚಾರಿಸಿದರೆ, ನವೆಂಬರ್ನಲ್ಲಿಯೇ ಬಿಲ್ ಪಾವತಿಯಾಗಿದೆ ಎಂಬ ಉಡಾಫೆ ಉತ್ತರ ಬರುತ್ತಿದೆ. ನಮ್ಮ ಬಳಿ ಯಂತ್ರಗಳನ್ನು ಬಾಡಿಗೆಗೆ ಕೇಳಿದ್ದು ಗ್ರಾಮ ಪಂಚಾಯತ್. ಹೀಗಾಗಿ ಎಸ್‌ಐಟಿ ಬಳಿ ಬಾಡಿಗೆ ಕೇಳುವ ಹಕ್ಕು ನಮಗಿಲ್ಲ ಎಂದು ಮಾಲಕರು ಅಲವತ್ತುಕೊಂಡಿದ್ದಾರೆ.
ಜುಲೈ 29, 2025ರಿಂದ ನಿರಂತರವಾಗಿ ಉತ್ಖನನ ಕಾರ್ಯಾಚರಣೆಯಲ್ಲಿ ಸುನೀಲ್ ಕನ್ಯಾಡಿ ಎಂಬವರ ಹಿಟಾಚಿಯನ್ನು ಉತ್ಖನನ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಕೇವಲ 10 ದಿನ ಮಾತ್ರ ಹಿಟಾಚಿ ಮೂಲಕ ಉತ್ಖನನ ನಡೆಸಿದ್ದು, 15 ದಿನ ಹಾಗೆ ನಿಂತಿದ್ದ ಕಾರಣ ಕೆಲಸಕ್ಕೆ ಬಳಸಿಕೊಂಡಿದ್ದಷ್ಟೇ ದಿನಗಳ ಬಿಲ್ ನೀಡುವಂತೆ ಮಾಲಕರು ಕೇಳಿದ್ದರು. ಹೀಗಿದ್ದರೂ ಕಳೆದ 9 ತಿಂಗಳಿನಿಂದ ಬಾಕಿ ಬಿಲ್ಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಉತ್ಖನನ ಕಾರ್ಯದ ವೇಳೆ ಇದ್ದ ಧರ್ಮಸ್ಥಳ ಪಂಚಾಯತ್ ಪಿಡಿಒ ಕೂಡ ಈಗ ನಿವೃತ್ತರಾಗಿದ್ದು, ಬಾಕಿ ಹಣವನ್ನು ಸಂಬಂಧಪಟ್ಟವರು ಆದಷ್ಟು ಬೇಗ ನೀಡಿ ಎಂಬ ಆಗ್ರಹ ಕೂಲಿ ಕಾರ್ಮಿಕರು, ಯಂತ್ರೋಪಕರಣ ಮತ್ತು ವಾಹನಗಳ ಮಾಲಕರಿಂದ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Tue, 12 May 26