ಮಂಗಳೂರು ಮಹಾನಗರ ಪಾಲಿಕೆಯ 153 ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ, ಯಾಕೆ ಹೀಗೆ?

ಆರು ತಿಂಗಳಿನಿಂದ ನಗರದ ಮಣ್ಣಗುಡ್ಡ ಹಾಗೂ ಬೈಕಂಪಾಡಿ ಪ್ರದೇಶದಲ್ಲಿ ಮಂಗಳೂರು ನಗರ ಪಾಲಿಕೆಯ ಈ ವಾಹನಗಳು ನಿಂತಲ್ಲೇ ನಿಂತಿವೆ. ವಾಹನಗಳು ಸ್ಟಾರ್ಟ್ ಮಾಡುವ ಸ್ಥಿತಿಯಲ್ಲಿ ಇವೆಯೋ ಎಂಬ ಸಂಶಯ ಮೂಡಿದೆ. ಶೀಘ್ರವೆ ಟೆಂಡರ್ ಪೂರ್ಣಗೊಳಿಸಿ ಸದುದ್ದೇಶಕ್ಕೆ ಖರೀದಿಸಿದ ಈ ವಾಹನಗಳ ಬಳಕೆ ಸರಿಯಾದ ಸಮಯಕ್ಕೆ ಆಗಬೇಕಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ 153 ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ, ಯಾಕೆ  ಹೀಗೆ?
ಮಂಗಳೂರು ಪಾಲಿಕೆಯ 153 ವಾಹನ ನಿಂತಲ್ಲೇ ತುಕ್ಕು ಹಿಡಿಯುತ್ತಿವೆ, ಹೀಗೆ ಯಾಕೆ?
Updated By: ಸಾಧು ಶ್ರೀನಾಥ್​

Updated on: Dec 05, 2023 | 3:08 PM

ಮಂಗಳೂರು ನಗರ ಪಾಲಿಕೆ (Mangalore Municipal Corporation) 60 ವಾರ್ಡ್‌ಗಳನ್ನು ಒಳಗೊಂಡ ಬೃಹದಾದ ಪಾಲಿಕೆ. ಈ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳ ತ್ಯಾಜ್ಯ ವಿಲೇವಾರಿ ಹೊಣೆಯನ್ನು (Garbage) ಖುದ್ದು ಪಾಲಿಕೆಯೇ ವಹಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಇದಕ್ಕಾಗಿ 30 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿ ನಡೆದಿದೆ. ಆದ್ರೆ ಈ ವಾಹನಗಳನ್ನು ಖರೀದಿ ಮಾಡಿ ಆರು ತಿಂಗಳೇ ಕಳೆದರೂ ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುವಂತಾಗಿದೆ (Rusting). ಸಾಲಿನಲ್ಲಿ ನಿಲ್ಲಿಸಿರುವ ಈ ವಾಹನಗಳನ್ನು ನೋಡುವಾಗ ನಿಮಗೆ ಬಳಕೆ ಮಾಡಿರುವ ವಾಹನದಂತೆ ಕಾಣಿಸಬಹುದು. ಆದ್ರೆ ಇದು ಬಳಕೆ ಮಾಡಿರುವ ವಾಹನವಲ್ಲ. ಬದಲಾಗಿ ಶೋ ರೂಂನಿಂದ ನೇರವಾಗಿ ತಂದು ಬಳಕೆ ಮಾಡದೆ ತೆರೆದ ಪ್ರದೇಶದಲ್ಲಿ ಇಟ್ಟಿರುವುದರಿಂದ ಈ ಹೊಸ ವಾಹನಗಳು ಹಳೆ ವಾಹನಗಳಂತಾಗಿವೆ. ತ್ಯಾಜ್ಯ ವಿಲೇವಾರಿಗೆ ಬಳಸುವ ಈ ವಾಹನಗಳು ಮಂಗಳೂರು ಮಹಾನಗರ ಪಾಲಿಕೆಗೆ ಸೇರಿರೋದು.

ಮಂಗಳೂರು sಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿ 30 ಕೋಟಿ ರೂ ವೆಚ್ಚದಲ್ಲಿ ಈ ವಾಹನಗಳನ್ನು ಖರೀದಿ ಮಾಡಲಾಗಿದೆ. 107 ಸಣ್ಣ ವೆಹಿಕಲ್, 30 ಟಿಪ್ಪರ್, 16 ಕಾಂಪ್ಯಾಕ್ಟರ್ ಸೇರಿದಂತೆ 153 ಈ ನೂತನ ವಾಹನಗಳನ್ನು ಖರೀದಿಸಿ ಆರು ತಿಂಗಳು ಕಳೆದಿದೆ. ಆದ್ರೆ ಈ ವಾಹನಗಳಿಗೆ ಡ್ರೈವರ್, ಲೋಡರ್ ಕೆಲಸ, ವರ್ಕ್‌ಶಾಪ್ ಹಾಗೂ ಮೂರು ವರ್ಷದ ನಿರ್ವಹಣೆಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ತಡವಾಗಿರುವ ಹಿನ್ನೆಲೆಯಲ್ಲಿ ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುವ ಪರಿಸ್ಥಿತಿ ಎದುರಾಗಿದೆ ಎನುತ್ತಾರೆ ಎ.ಸಿ ವಿನಯ್‌ರಾಜ್, ಪಾಲಿಕೆ ಸದಸ್ಯ-ಮಂಗಳೂರು ಮಹಾನಗರ ಪಾಲಿಕೆ.

ಕಳೆದ ಏಳು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿ ಹೊಣೆಯನ್ನು ಆ್ಯಂಟನಿ ಹೆಸರಿನ ಖಾಸಗಿ ಸಂಸ್ಥೆ ವಹಿಸಿಕೊಂಡಿತ್ತು. ಆದ್ರೆ ಈ ಸಂಸ್ಥೆಯ ಟೆಂಡರ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಆ್ಯಂಟನಿ ಸಂಸ್ಥೆಯ ಬದಲು ಮಹಾನಗರ ಪಾಲಿಕೆಯೇ ಸ್ವತಃ ತ್ಯಾಜ್ಯ ವಿಲೇವಾರಿ ಮಾಡಲು ಯೋಜನೆ ಹಾಕಿಕೊಂಡಿದೆ.

ಇದಕ್ಕಾಗಿಯೇ ಈ ತ್ಯಾಜ್ಯ ವಿಲೇವಾರಿ ವಾಹನಗಳನ್ನು ಪ್ರಸ್ತುತ ಬಿಜೆಪಿ ಆಡಳಿತದ ಅವಧಿಯಲ್ಲಿ ಖರೀದಿಸಲಾಗಿದೆ. ಆದ್ರೆ ಈ ವಾಹನಗಳ ನಿರ್ವಹಣೆಯ ಟೆಂಡರ್‌ ಕರೆಯುವ ವಿಚಾರದಲ್ಲಿ ಗೊಂದಲ ಉಂಟಾಗಿರುವುದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಈ ವಿಚಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿದ್ದು ವಿಪಕ್ಷ ಸದಸ್ಯರು ಶೀಘ್ರ ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಆಯಾ ವಲಯದಲ್ಲಿ ಈ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಸೇರಿದಂತೆ ನಿರ್ವಹಣೆಗೆ ಬೇಕಾದ ಕ್ರಮ ಕೈಗೊಳ್ಳುವುದಾಗಿ ಮೇಯರ್ ತಿಳಿಸಿದ್ದಾರೆ.