ಮುಲ್ಕಿ ಉಗ್ರ ನರಸಿಂಹ ದೇವರಿಗೆ ಒಂದಲ್ಲ, ಎರಡಲ್ಲ 40 ಸಾವಿರ ಎಳನೀರಿನ ಅಭಿಷೇಕ!

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 28, 2023 | 3:46 PM

ಕುಂಭಗೋಣದ ವಿಜಯೇಂದ್ರ ತೀರ್ಥರು ತಮಗೆ ಸಿಕ್ಕಂತಹ ಈ ಭವ್ಯವಾದ ಮೂರ್ತಿಯನ್ನು ಸುಮಾರು 5 ಶತಮಾನಗಳ ಹಿಂದೆ ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗುತ್ತದೆ. ಇಲ್ಲಿಯ ಶ್ರೀ ಉಗ್ರ ನರಸಿಂಹ ದೇವರ ಮೂರ್ತಿಯು ಎಂಟು ಕೈಗಳನ್ನು ಹೊಂದಿದ್ದು, ಒಂಟಿ ಕಾಲಿನಲ್ಲಿ ನಿಂತು ತೊಡೆಯ ಮೇಲೆ ಹಿರಣ್ಯಕಶಪುವನ್ನು ಉಗುರಿನಿಂದ ಸೀಳುವ ಭಂಗಿಯಲ್ಲಿದೆ. ಈ ಮೂರ್ತಿಯನ್ನು ಸ್ವತಃ ಪ್ರಹ್ಲಾದನು ಪೂಜಿಸಿದ್ದನು ಎಂಬ ನಂಬಿಕೆ ಇದೆ.

ಮುಲ್ಕಿ ಉಗ್ರ ನರಸಿಂಹ ದೇವರಿಗೆ ಒಂದಲ್ಲ, ಎರಡಲ್ಲ 40 ಸಾವಿರ ಎಳನೀರಿನ ಅಭಿಷೇಕ!
ಮುಲ್ಕಿ ಉಗ್ರ ನರಸಿಂಹ ದೇವರು
Follow us on

ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಬಗ್ಗೆ ನೀವು ಕೇಳಿರಬಹುದು. ಈ ದೇವಸ್ಥಾನ ಪ್ರಸಿದ್ದಿ ಪಡೆಯುವುದರ ಜೊತೆಗೆ ಇಲ್ಲಿನ ಕೆಲವು ಸಂಪ್ರದಾಯಗಳು ಕೂಡ ಎಲ್ಲೆಡೆ ಮೆಚ್ಚುಗೆ ಪಡೆದಿರುವುದು ಸುಳ್ಳಲ್ಲ. ಇಲ್ಲಿ ಹುಣ್ಣಿಮೆ ದಿನ ನಡೆಯುವ ಉತ್ಸವದ ಜೊತೆಗೆ ಆ ದಿನ ನೆರವೇರುವ ಕೆಲವು ಆಚರಣೆ ನೋಡಿ ಕಲಿಯುವಂತದ್ದಿದೆ. ಇಲ್ಲಿನ ದೇವರು ಉಗ್ರ ನರಸಿಂಹ. ಈ ದೇವಸ್ಥಾನದ ಜೊತೆಗೆ ದೇವರ ಪ್ರತಿಮೆಯೂ ಕೂಡ ಹಲವಾರು ಕುತೂಹಲ ಸಂಗತಿಗಳಿಂದ ಕೂಡಿದೆ. ಕುಂಭಗೋಣದ ವಿಜಯೇಂದ್ರ ತೀರ್ಥರು ತಮಗೆ ಸಿಕ್ಕಂತಹ ಈ ಭವ್ಯವಾದ ಮೂರ್ತಿಯನ್ನು ಸುಮಾರು 5 ಶತಮಾನಗಳ ಹಿಂದೆ ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗುತ್ತದೆ. ಇಲ್ಲಿಯ ಶ್ರೀ ಉಗ್ರ ನರಸಿಂಹ ದೇವರ ಮೂರ್ತಿಯು ಎಂಟು ಕೈಗಳನ್ನು ಹೊಂದಿದ್ದು, ಒಂಟಿ ಕಾಲಿನಲ್ಲಿ ನಿಂತು ತೊಡೆಯ ಮೇಲೆ ಹಿರಣ್ಯಕಶಪುವನ್ನು ಉಗುರಿನಿಂದ ಸೀಳುವ ಭಂಗಿಯಲ್ಲಿದೆ. ಈ ಮೂರ್ತಿಯನ್ನು ಸ್ವತಃ ಪ್ರಹ್ಲಾದನು ಪೂಜಿಸಿದ್ದನು ಎಂಬ ನಂಬಿಕೆ ಇದೆ.

ತದನಂತರ ಪ್ರತಿ ವರ್ಷವೂ ಈ ದಿನ ಪ್ರತಿಷ್ಠಾ ವರ್ಧಂತಿ ಉತ್ಸವವನ್ನು ಇಲ್ಲಿ ಆಚರಣೆ ಮಾಡಲಾಗುತ್ತದೆ. ಉಗ್ರ ನರಸಿಂಹ ವಿಷ್ಣುವಿನ ರೂಪವಾದರೂ ಕೂಡ ಅವನ ಉಗ್ರತ್ವವನ್ನು ಕಡಿಮೆ ಮಾಡಲು ಇಲ್ಲಿ ಸಿಯಾಳ ಅಭಿಷೇಕವನ್ನು ಮಾಡಲಾಗುತ್ತದೆ. ಅದು ಒಂದಲ್ಲ ಎರಡಲ್ಲ ಸರಿಸುಮಾರು 40 ಸಾವಿರ ಸಿಯಾಳವನ್ನು ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಇದನ್ನು ಯಾಕಾಗಿ ಮಾಡಲಾಗುತ್ತದೆ ಎಂಬ ಪ್ರಶ್ನೆ ಹುಟ್ಟುಕೊಳ್ಳಬಹುದು? ಏಕೆಂದರೆ ಉಗ್ರ ನರಸಿಂಹನ ಕೋಪ- ತಾಪ ಅಂತಿತದಲ್ಲ. ಅವನ ಸಿಟ್ಟನ್ನು ಕಡಿಮೆ ಮಾಡುವುದರ ಜೊತೆಗೆ ಅವನನ್ನು ಶಾಂತವಾಗಿಸಲು ಈ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಕಾರ್ಯಕ್ರಮಕ್ಕೆ ಮುಲ್ಕಿ ಮಾತ್ರವಲ್ಲ ದೂರದ ಊರುಗಳಿಂದ ಭಜಕರು ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ಬಂದಂತ ಸೀಯಾಳವನ್ನು ಶುದ್ಧಗೊಳಿಸಿ, ಅದನ್ನು ಕೆತ್ತಿ ಬಳಿಕ ಅದನ್ನು ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ನಂತರ ಅದನ್ನು ಅಲ್ಲಿ ಬಂದಿರುವ ಭಕ್ತರಿಗೆ ಹಂಚಲಾಗುತ್ತದೆ. ಸೀಯಾಳದ ಜೊತೆಗೆ ಹಾಲು, ತುಪ್ಪ, ಜೇನು ಹೀಗೆ ಸುವಸ್ತುಗಳಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಬೆಳಗ್ಗೆಯಿಂದ ಸಂಜೆಯ ತನಕವೂ ನಡೆಯುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಉಳಿದ ತೆಂಗಿನ ಒಟ್ಟೆ ಅಥವಾ ಕಡಿಗಳಿಂದ ತಯಾರಾಗುತ್ತೆ ಗೊಬ್ಬರ!

ಅಭಿಷೇಕ ಆದ ಬಳಿಕ ಉಳಿದ ತೆಂಗಿನ ಒಟ್ಟೆಗಳನ್ನು ಅಥವಾ ತೆಂಗಿನ ಕಡಿಗಳನ್ನು ಒಟ್ಟುಗೂಡಿಸಿ ದೇವಸ್ಥಾನಕ್ಕೆ ಸಂಬಂಧ ಪಟ್ಟ ತೋಟಕ್ಕೆ ತಂದು ಹಾಕಲಾಗುತ್ತದೆ. ಇಲ್ಲಿ ಇದನ್ನು ಗೊಬ್ಬರ ಮಾಡಿ ತೋಟದಲ್ಲಿರುವ ಮರ ಗಿಡಗಳಿಗೆ ಹಾಕಲಾಗುತ್ತದೆ. ಜೊತೆಗೆ ದೇವಸ್ಥಾನದಲ್ಲಿ ಊಟ ಮಾಡಿದ ಬಾಳೆ ಎಲೆಗಳನ್ನೂ ಕೂಡ ಇಲ್ಲಿ ತಂದು ಗೊಬ್ಬರ ಮಾಡಲಾಗುತ್ತದೆ. ಹಾಗಾಗಿ ದೇವಸ್ಥಾನದಲ್ಲಿ ನಡೆಯುವಂತಹ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ವ್ಯರ್ಥವೂ ಆಗುವುದಿಲ್ಲ. ದೇವಸ್ಥಾನದ ಈ ರೀತಿಯ ಪ್ರಯತ್ನವನ್ನು ಎಲ್ಲರೂ ಮೆಚ್ಚಲೇ ಬೇಕಾಗಿದೆ.

ಇದನ್ನೂ ಓದಿ: ನರಸಿಂಹ ಸ್ವಾಮಿಯ ಮಂತ್ರದಲ್ಲಿದೆ ಯೋಗ, ಭಾಗ್ಯದ ಶಕ್ತಿ, ಪ್ರತಿ ರಾಶಿಯವರು ಸಂಜೆ ಈ ಮಂತ್ರ ಪಠಿಸಿ

ಈ ಬಗೆಗಿನ ಸಂಪೂರ್ಣ ಮಾಹಿತಿ ನೀಡಿರುವ ಒಂದು ವಿಡಿಯೋವನ್ನು “ಉಡುಪಿಯ ಕಂಡೀರಾ” ಎಂಬ ಫೇಸಬುಕ್ ಪೇಜ್, ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ಜನರ ಮೆಚ್ಚುಗೆ ಪಡೆದಿದೆ. ಇಂತಹ ಒಂದು ಒಳ್ಳೆಯ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳುವುದರ ಜೊತೆಗೆ ದೇವಸ್ಥಾನದ ಮಹಿಮೆಯನ್ನು ಕೊಂಡಾಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಒಂದು ದಿನದಲ್ಲಿಯೇ ಬಾರಿ ವೈರೆಲ್ ಆಗುವುದರ ಜೊತೆಗೆ ಜನರ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ