ಬೀದರ್: ಉಗ್ರ ನರಸಿಂಹ ದೇವಸ್ಥಾನದ ಕಾಮಗಾರಿ ಸ್ಥಗಿತ -ಡಿಸಿಗೆ ತರಾಟೆಗೆ ತೆಗೆದುಕೊಂಡ ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್
Bidar Ugra Narasimha Temple: ಬೀದರ್ - ಮೂರು ರಾಜ್ಯಗಳ ಅಪಾರ ಭಕ್ತರನ್ನ ಹೊಂದಿರುವ ಉಗ್ರ ನರಸಿಂಹ ದೇವಸ್ಥಾನದ ಕಾಮಗಾರಿ ಸ್ಥಗಿತ: ಡಿಸಿಗೆ ತರಾಟೆಗೆ ತೆಗೆದುಕೊಂಡ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್
ಮೂರು ರಾಜ್ಯಗಳ ಅಪಾರ ಪ್ರಮಾಣದ ಭಕ್ತರನ್ನ ಹೊಂದಿರುವ ಏಕೈಕ ದೇವಸ್ಥಾನವದು. ವಾರಕ್ಕೆ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಹತ್ತಾರು ಕಾಮಗಾರಿ ಕೈಗೊಂಡಿದ್ದರು. ಆದರೆ ಇಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಏಕಾಏಕಿ ಬಂದ್ ಆಗಿದ್ದು ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ… ಅರ್ಧಕ್ಕೆ ನಿಂತ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನದ (Ugra Narasimha Temple) ಕಾಮಗಾರಿ… ಪ್ರತಿದಿನ ತೆಲಂಗಾಣ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು… ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತುಕೊಂಡು ದೇವರ ದರ್ಶನ ಪಡೆಯೋ ಸ್ಥಿತಿ ಭಕ್ತರದ್ದು… ಹೌದು ನರಸಿಂಹ, ಉಗ್ರ ನರಸಿಂಹ, ಸಿಂಹನ ಅವತಾರ ಪುರುಷ ಅಂತಾ ಕರೆಯಿಸಿಕೊಳ್ಳೋ ನರಸಿಂಹ ನೆಲೆಸಿರುವ ಈ ಪವಿತ್ರ ಪುಣ್ಯಸ್ಥಳ ಇರೋದು ಬೀದರ್ (Bidar) ನಲ್ಲಿ. ಉಗ್ರನರಸಿಂಹ ದೇವಸ್ಥಾನ ಇರುವ ಈ ಸ್ಥಳ ನರಸಿಂಹ ಝರಣಿ ಅಂತಲೇ ಫೇಮಸ್. ಬೀದರ್ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳ. ಬಹಮನಿ ಸುಲ್ತಾನರು ಈ ನೆಲವನ್ನ ಆಳಿ, ಶ್ರೀಮಂತ ಶಿಲ್ಪಕಲೆಯನ್ನ ಉಡುಗೊರೆಯಾಗಿ ನೀಡಿದ್ದಾರೆ.
ಇಂತಹ ಸ್ಥಳದಲ್ಲಿರುವ ಉಗ್ರನರಸಿಂಹನ ದೇವಸ್ಥಾನ ಭಕ್ತರನ್ನ ಆಕರ್ಷಿಸುವ ಸ್ಥಳವಾಗಿದೆ. ಪ್ರತಿ ಶನಿವಾರ, ರವಿವಾರ, ಹುಣ್ಣಿಮೆ, ಆಮಾವಾಸ್ಯೆ ಹಾಗೂ ನರಸಿಂಹ ಜಯಂತಿ ಸಮಯದಲ್ಲಿ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನವನ್ನ ಪಡೆದುಕೊಳ್ಳುತ್ತಾರೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ-ತೆಲಂಗಾಣ- ಮಹಾರಾಷ್ಟ್ರಗಳಿಂದ ಅಪಾರ ಪ್ರಮಾಣದ ಭಕ್ತರು, ನವ ವಧು ವರರು ನರಸಿಂಹ ಝರಣಿಗೆ ಬಂದು ಪೂಜಿಸುವ ಸಂಪ್ರದಾಯವಿದೆ.
ಹೀಗಾಗಿಯೇ ಇಲ್ಲಿಗೆ ಬರುವ ಭಕ್ತರು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಗಂಟೆಗಟ್ಟಲೇ ಬಿಸಿಲಿನಲ್ಲಿ ನಿಂತುಕೊಂಡು ದರ್ಶನ ಪಡೆಯ ಬೇಕಾದ ಸ್ಥಿತಿಯಿತ್ತು. ಹೀಗಾಗಿ ಭಕ್ತರಿಗೆ ನೆರಳಿನ ವ್ಯವಸ್ಥೆ, ಹೆಣ್ಣು ಮಕ್ಕಳಿಗೆ ಸ್ನಾನದ ಗೃಹದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಹೆಣ್ಣು ಮಕ್ಳಳಿಗೆ ಬಟ್ಟೆ ಬದಲಾವಣೆ ಮಾಡಲು ರೂಮ್ ವ್ಯಸ್ಥೆಯನ್ನ ಮಾಡುತ್ತಿದ್ದರು. ಆದರೆ ಈಗ ಏಕಾಏಕಿ ಕಾಮಗಾರಿ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದು, ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ದೇವಸ್ಥಾನಕ್ಕೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಭಕ್ತರು ಹಾಕಿದ ಕಾಣಿಕೆ ಬರುತ್ತದೆ. ಆದರೆ ಹಣದ ಕೊರತೆಯ ನೆಪವೊಡ್ಡಿ ದೆವಸ್ಥಾನ ಕಾಮಗಾರಿಯನ್ನ ಬಂದ್ ಮಾಡಿದ್ದು ಭಕ್ತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಈ ದೇವಸ್ಥಾನದ ಇತಿಹಾಸ ನೋಡುವುದಾದರೆ ನರಸಿಂಹ ಝರಣಿ ಗುಹಾ ದೇವಾಲಯ ಕರ್ನಾಟಕದ ಅಪರೂಪದ ಯಾತ್ರಾಸ್ಥಳ ಜತೆಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ಸರಿ ಸುಮಾರು 600 ವರ್ಷಗಳಷ್ಠು ಹಳೆಯದಾದ ನರಸಿಂಹ ದೇವಸ್ಥಾನ ಇಂದಿಗೂ ಭಕ್ತರನ್ನ ತನ್ನತ್ತ ಸೇಳೆಯುತ್ತಿದೆ. ಈ ದೇವಸ್ಥಾನ ವಿಶೇಷತೆಯನ್ನ ನೋಡಿದರೆ ಎಂತಹವರಿಗೂ ಅಶ್ಚರ್ಯವಾಗದೇ ಇರದು. ಅಂತಹ ಪವಾಡ ಇಲ್ಲಿ ನಡೆಯುತ್ತದೆ. ನರಸಿಂಹನ ದರ್ಶನ ಪಡೆಯಬೇಕೆಂದರೆ ಗುಹೆಯಲ್ಲಿ ಸುಮಾರು 200 ಮೀಟರ್ ಉದ್ದದ ಎದೆ ಎತ್ತರದ ನೀರಿನಲ್ಲಿ ಸಾಗಿ ದರ್ಶನ ಪಡೆಯಬೇಕು.
Also Read: ಐತಿಹಾಸಿಕ ವಾಟರ್ ಕರೇಜ್ ಬೀದರಿನಲ್ಲಿದೆ, ಆದ್ರೆ ಮುಚ್ಚಿ ಹೋಗಿದೆ! ಜಿಲ್ಲಾಡಳಿತವೂ ಕಣ್ಮುಚ್ಚಿ ಕುಳಿತಿದೆ
ಮಳೆಗಾಲ, ಚಳಿಗಾಲ, ಬೇಸಿಗೆಕಾಲದಲ್ಲಿ.. ಹೀಗೆ ಯಾವುದೇ ಕಾಲದಲ್ಲಿಯೂ ಇಲ್ಲಿನ ನೀರು ಬತ್ತಿದ ಉದಾಹರಣೆ ಇಲ್ಲ. ನರಸಿಂಹ ಝರಣಿ ಗುಹಾ ದೇವಾಲಯ ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಇನ್ನೂರು ಮೀಟರ್ ದೂರ ನಡೆದು ಹೋಗಿ ದೇವರ ದರ್ಶನ ಮಾಡಬೇಕು. ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿ ನಡೆದು ಸಾಗುವುದು ಒಂದು ವಿಶಿಷ್ಟ ಅನುಭವ. ಗುಹೆಯ ಮಬ್ಬುಗತ್ತಲಿನಲ್ಲಿ ನೀರಿನಲ್ಲಿ ನಡೆದು ಹೋಗಲು ಮಾನಸಿಕ ಸಿದ್ಧತೆ ಇದ್ದರೆ ದರ್ಶನ ಸುಲಭ.
ಗುಹೆಯೊಳಗಿನ ನೀರು ಯಾವುದೇ ಸಂದರ್ಭದಲ್ಲೂ ಎದೆಮಟ್ಟ ಮೀರುವುದಿಲ್ಲ. ಈ ನೀರಲ್ಲಿ ಎಷ್ಟು ಸಲ ಓಡಾಡಿದರೂ ಶೀತ ಆಗುವುದಿಲ್ಲ! ಈ ನೀರಿನಲ್ಲಿ ಗಂಧಕ (ಸಲ್ಫರ್) ಅಂಶವಿದೆ. ನೀರು ಚಳಿಗಾಲದಲ್ಲೂ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ನೆನೆದರೆ ಚರ್ಮದ ರೋಗಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ. ಎರಡು ವಾರದ ಹಿಂದೆ ಈ ಉಗ್ರ ನರಸಿಂಹನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ (Tourism Minister H.K. Patil ) ದೇವರ ದರ್ಶನ ಪಡೆದುಕೊಂಡು ಇಲ್ಲಿನ ಅವ್ಯವಸ್ಥೆಯನ್ನ ನೋಡಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೂರು ರಾಜ್ಯದ ಭಕ್ತರನ್ನ ಹೊಂದಿರುವ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅವರಿಗೆ ಆದಷ್ಟು ಬೇಗ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಿ ಎಂದು ತಾಕೀತು ಮಾಡಿದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ನರಸಿಂಹ ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಇತಿಹಾಸ ಪ್ರಸಿದ್ದ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಇಂತಹ ಅಪರೂಪದ ದೇವಸ್ಥಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಸೌಲಭ್ಯಗಳನ್ನ ಮಾತ್ರ ಕಲ್ಪಿಸಲಾಗಿಲ್ಲ ಅನ್ನೋ ಕೊರಗು ಭಕ್ತರನ್ನ ಕಾಡುತ್ತಿರುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Mon, 27 November 23