ಮಂಗಳೂರು: ಹಮೀದ್ ಎನ್ನುವ ಖತರ್ನಾಕ್ ಕಳ್ಳ ಕಳೆದ ಹಲವಾರು ಸಮಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ. ಆದರೆ ನವೆಂಬರ್ ತಿಂಗಳಲ್ಲಿ ಆತ ಮಂಗಳೂರಿನ ಹೂವಿನ ಅಂಗಡಿಯೊಂದರಿಂದ 9 ಲಕ್ಷ ಹಣ ಹಾಗೂ ಸಿಸಿ ಟಿವಿ ಡಿವಿಆರ್ ಕದ್ದು ಎಸ್ಕೇಪ್ ಆಗಿದ್ದ ಪ್ರಕರಣದಲ್ಲಿ ಇದೀಗ ಪೊಲೀಸರಿಗೆ ತಗಲಾಕೊಂಡಿದ್ದಾನೆ. ಇಂಟರೆಸ್ಟಿಂಗ್ ವಿಚಾರ ಅಂದರೆ ಆತ ಕದ್ದ 9 ಲಕ್ಷ ಹಣವನ್ನು ಮಂಗಳೂರಿನ ಬಂದರು ಪೊಲೀಸ್ ಠಾಣೆಯ ಪಕ್ಕದಲ್ಲೇ ಇದ್ದ ಪಾಳು ಕಟ್ಟಡದಲ್ಲಿ ಅಡಗಿಸಿಟ್ಟದ್ದನು.
ಆದರೆ ಈ ಕಳ್ಳ ಹಣ ಅಡಗಿಸಿಟ್ಟಿದ್ದ ಪಾಳು ಬಿದ್ದ ಕಟ್ಟಡವನ್ನು ಮರುದಿನವೇ ಡೆಮಾಲಿಶ್ ಮಾಡಲಾಗಿತ್ತು. ಎರಡು ದಿನಗಳ ಬಳಿಕ ಬಂದಿದ್ದ ಕಳ್ಳ ಹಮೀದ್ ಕಟ್ಟಡ ನೆಲಸಮ ಆಗಿದ್ದು ನೋಡಿ ಕಂಗಾಲಾಗಿದ್ದ. ಹೀಗಾಗಿ ಕಟ್ಟಡದ ಮಣ್ಣಿನ ರಾಶಿಯನ್ನು ತೆಗೆಯುವವರೆಗೂ ಅಲ್ಲೇ ವಾಚ್ ಮಾಡಿಕೊಂಡಿದ್ದ. ಈ ಮಣ್ಣು ತೆಗೆಯಲು ಬಂದಿದ್ದ ಜೆಸಿಬಿ ಅಪರೇಟರ್ಗೆ ಈ ಹಣ ಸಿಕ್ಕಿದ್ದು ಆತ ಯಾರಿಗೂ ಹೇಳದೆ ತೆಗೆದುಕೊಂಡು ಹೋಗಿದ್ದ. ಸದ್ಯ ಹಮೀದ್ ಬಳಿ ಸಿಕ್ಕ 5.8 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ಖತರ್ನಾಕ್ ಕಳ್ಳನ ಮೇಲೆ ಸುಮಾರು 30 ಅಧಿಕ ಪ್ರಕರಣಗಳು ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸುಮಾರು 22 ಅರೆಸ್ಟ್ ವಾರೆಂಟ್ ಈತನ ಮೇಲಿದ್ದರೂ ಈತ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡು ಮತ್ತೆ ಕಳ್ಳತನ ಮುಂದುವರೆಸಿದ್ದಾನೆ. ಇನ್ನು ಒಂದು ತಮಾಷೆ ವಿಚಾರವೆನೆಂದರೆ ಪೊಲೀಸರು ಈತನನನ್ನು ಬಂಧಿಸಿ ಆತನ ಮನೆಗೆ ಕರೆದುಕೊಂಡು ಹೋಗಿದ್ದರೆ ಈತನ ಹೆಂಡತಿ ಬಟ್ಟೆಗಳನ್ನ ಪ್ಯಾಕ್ ಮಾಡಿ ಕಳುಹಿಸಿಕೊಟ್ಟಿದ್ದಾಳಂತೆ. ಈತ ಅರೆಸ್ಟ್ ಆಗೋದು ಮಾಮೂಲಿ ವಿಚಾರವಾಗಿದ್ದು ಒಮ್ಮೆ ಹೋದರೆ ಮೂರು ನಾಲ್ಕು ತಿಂಗಳು ಬರೋದಿಲ್ಲ ಹೀಗಾಗಿ ಬಟ್ಟೆ ಪ್ಯಾಕ್ ಮಾಡಿ ಕೊಟ್ಟಿದ್ದೇನೆ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಳಂತೆ.
ಇದನ್ನೂ ಓದಿ:Shivamogga: ಕಾರ್ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್, ಕಾರ್ ಮಾಲೀಕನೇ ಅಂದರ್ ಆದ ಕತೆಯಿದು!
ಕಳ್ಳ ಅಡಗಿಸಿಟ್ಟ ಹಣ ಸಿಕ್ಕ ಜೆಸಿಬಿ ಅಪರೇಟರ್ ಬಡತನಕ್ಕೆ ದೇವರೇ ನನಗೆ ಈ ಹಣ ಕೊಟ್ಟಿದ್ದಾನೆ ಎಂದು ಅದನ್ನ ತೆಗೆದುಕೊಂಡು ಹೋಗಿ ಖರ್ಚು ಮಾಡಿದ್ದ. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಹಿನ್ನಲೆಯಲ್ಲಿ ಆತನನ್ನು ಬಂಧಿಸಬಹುದಾಗಿದ್ದರೂ ಸದ್ಯ ಖರ್ಚು ಮಾಡಿದ ಹಣ ವಾಪಾಸು ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಕದ್ದ ಹಣ ಎಲ್ಲೋ ಅಡಗಿಸಿಟ್ಟು ಅದನ್ನೇ ಕಳೆದುಕೊಂಡ ಕಳ್ಳ ಹಮೀದ್ ಮಾತ್ರ ಈಗ ಜೈಲು ಕಂಬಿ ಹಿಂದೆ ಬಂಧಿಯಾಗಿದ್ದಾನೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ