ಮಂಗಳೂರು: ಬಡ ಹೆಣ್ಣುಮಗಳ ಮದುವೆಗಾಗಿ ಮುಸ್ಲಿಂ ಕುಟುಂಬ ನೂರಾರು ಹಸು ಕರು ಸಾಕುತ್ತಿದೆ, ಇದಕ್ಕೆ ಟೆಕ್ಕಿ ಮಗಳೂ ಸಾಥ್ ನೀಡಿದ್ದಾಳೆ!
ಮೈಮುನಾ ಪತಿ ಅಬ್ದುಲ್ ಮಜೀದ್ ಅವರಿಗೆ 101 ದನಗಳನ್ನು ಸಾಕಣೆ ಮಾಡಿ, ಬರುವ ಲಾಭಾಂಶದಿಂದ ಬಡ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಬೇಕೆಂಬ ಕನಸಿತ್ತು. ಆದರೆ ಅಬ್ದುಲ್ 2 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ಹೀಗಾಗಿ..
ಇವತ್ತಿನ ಕಾಲದಲ್ಲಿ ಒಂದೆರಡು ಹಸುಗಳನ್ನು ಸಾಕುವುದೇ ಕಷ್ಟ. ಅಂಥದ್ದರಲ್ಲಿ ಕಡಲನಗರಿ ಮಂಗಳೂರಿನಲ್ಲಿ ಮುಸ್ಲಿಂ ಕುಟುಂಬವೊಂದು (muslim family) ಹಟ್ಟಿ ತುಂಬಾ ದನ, ಕರುಗಳನ್ನು ಸಾಕಿ ಕ್ಷೀರ ಸಾಗರವನ್ನೇ ಹರಿಸಿದೆ. ತಾಯಿ ಮಗಳು ಒಟ್ಟು ಸೇರಿ ಈ ಗೋಸಾಕಣೆ (cow) ಮಾಡುತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಟ್ಟಿ ತುಂಬಾ ಅಂಬಾ ಎನ್ನುವ ಹಸುಗಳು, ಆ ಹಸುಗಳ ಆರೈಕೆಯಲ್ಲಿ ಬ್ಯುಸಿಯಾಗಿರುವ ತಾಯಿ ಮತ್ತು ಮಗಳು. ಹೌದು..ಇದು ಮಂಗಳೂರು ನಗರ (mangalore) ಹೊರವಲಯದ ಹರೇಕಳದ (harekala) ಕಿಸಾನ್ ನಗರದಲ್ಲಿರುವ ಮುಸ್ಲಿಂ ಕುಟಂಬವೊಂದು ನಡೆಸುತ್ತಿರುವ ಯಶಸ್ವಿ ಹೈನುಗಾರಿಕೆಯ ದೃಶ್ಯಗಳು. ತಾಯಿ ಮೈಮುನಾ, ಮಗಳು ಮರ್ಝಿನಾ ಈ ಸಾಹಸದ ಹಿಂದಿನ ರೂವಾರಿಗಳು. ಇವರ ವಿಶಾಲವಾದ ಹಟ್ಟಿಯಲ್ಲಿ ಒಂದೆರಡು ದಿನಗಳಲ್ಲಿ ಹುಟ್ಟಿರುವ ಕರುಗಳಿಂದ ಹಿಡಿದು ಲೀಟರ್‌ಗಟ್ಟಲೆ ಹಾಲು ಕೊಡುವ ಬರೋಬ್ಬರಿ 60ಕ್ಕೂ ಹೆಚ್ಚು ಹಸುಗಳಿವೆ.
ಮೈಮುನಾ ಪತಿ ಅಬ್ದುಲ್ ಮಜೀದ್ ನೂರಾರು ಆಡುಗಳು, ಹತ್ತಾರು ಹಸುಗಳನ್ನು ಸಾಕಿದ್ದರು. ಆದರೆ ಆಡುಗಳು ಕಾಯಿಲೆಯಿಂದ ಸತ್ತ ಬಳಿಕ ಇದ್ದ ಕೆಲವು ಆಡುಗಳನ್ನು ಮಾರಾಟ ಮಾಡಿದರು. ದನ ಸಾಕಣೆಯನ್ನು ಕೈ ಬಿಡಲಾಗಿತ್ತು. ಆದರೆ ಅವರಿಗೆ 101 ದನಗಳನ್ನು ಸಾಕಣೆ ಮಾಡಿ, ಹೈನು ಉತ್ಪನ್ನಗಳ ಲಾಭಾಂಶದಿಂದ ಬಡ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಬೇಕೆಂಬ ಕನಸಿತ್ತು. ಆದರೆ ಅಬ್ದುಲ್ ಮಜೀದ್ ಅವರು ಎರಡು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ಹೀಗಾಗಿ ಇದೀಗ ಅವರ ಕನಸನ್ನು ನನಸು ಮಾಡಲು ಅವರ ಪತ್ನಿ ಮೈಮುನಾ ಹಾಗೂ ಪುತ್ರಿ ಮರ್ಝಿನಾ ಟೊಂಕಕಟ್ಟಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರಿಂಗ್ (techie daughter) ಮಾಡಿರುವ ಮರ್ಝಿನಾ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಅಮ್ಮನ ಹೈನುಗಾರಿಕೆಗೆ ಜೊತೆಯಾಗಿ ನಿಂತಿದ್ದಾರೆ. ಹಿಂದೆ ತಾಯಿ ಮತ್ತು ಮಗಳೇ ದನ ಕರುಗಳ ನಿರ್ವಹಣಾ ಕೆಲಸ ಮಾಡುತಿದ್ರು. ಆದ್ರೆ ದಿನ ಕಳೆದಂತೆ ಹಟ್ಟಿಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಇದೀಗ ನಾಲ್ವರು ಕೆಲಸಗಾರರು ದನಗಳನ್ನು ನೋಡಿಕೊಳ್ಳುತ್ತಿದ್ದು, ದಿನಕ್ಕೆ 350 ಲೀಟರ್ ಹಾಲನ್ನು ಡಿಪೊಗೆ ನೀಡುತ್ತಿದ್ದಾರೆ. ಹಸು-ಕರುಗಳ ನಿರ್ವಹಣೆಯಾಗಿ ಉಳಿಕೆಯಾದ ಹಣದಲ್ಲಿ ಸಮಾಜ ಸೇವೆಗೂ ನೀಡುತ್ತಿದ್ದಾರೆ.
ಗೋ ಸಾಕಾಣೆ ಜೊತೆ ಆಡು ಸಾಕಾಣೆಯನ್ನು ಮಾಡುತ್ತಿದ್ದಾರೆ. ಮುಂದೆ ದೊಡ್ಡ ಮಟ್ಟದಲ್ಲಿ ಫಾರ್ಮ್ ವಿಸ್ತರಿಸುವ ಯೋಜನೆ ಈ ಕುಟಂಬದ್ದಾಗಿದೆ. ಒಟ್ಟಿನಲ್ಲಿ ಹೈನುಗಾರಿಕೆ ಎಂದರೆ ಮೂಗು ಮುರಿಯುವವರಿಗೆ ಈ ತಾಯಿ-ಮಗಳ ಹೈನುಗಾರಿಕೆಯ ಸಾಹಸ ಮಾದರಿಯಾಗಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು