ವಿಷ ನಿಜಕ್ಕೂ ದುಬಾರಿಯೇ! ಅದನ್ನು ಸಂಗ್ರಹಿಸುವಲ್ಲಿಯೂ ಅಷ್ಟೇ! ಅದನ್ನು ರಕ್ಷಿಸಿಡುವಲ್ಲಿಯೂ ಅಷ್ಟೇ! ಕೊನೆಗೆ ಅದನ್ನು ಬಳಸಿದ ಮೇಲೂ ಅಷ್ಟೇ ದುಬಾರಿಯಾದೀತು. ಆದರೆ ಅದನ್ನು ಹಿತಮಿತವಾಗಿ, ವೈದ್ಯಕೀಯ ಪ್ರಮಾಣದಲ್ಲಿ ಬಳಸಿದರೆ ಸುರಕ್ಷಿತ! ಆರೋಗ್ಯವರ್ಧಕವೂ ಹೌದು. ಹೂವಿನ ಮಕರಂದ ಹೀರಿ ಜೇನು ಸಂಗ್ರಹಿಸುವ ಜೇನುನೊಣ ಪರೋಪಕಾರಿ ಜೀವಿ. ಕರಾವಳಿ ಭಾಗದಲ್ಲಿ ಈ ಜೇನು ಕೃಷಿ ಮಾಡುವ ಅನೇಕ ಕೃಷಿಕರಿದ್ದಾರೆ. ಆದ್ರೆ ಇಲ್ಲೊಬ್ಬರು ಜೇನು ನೊಣಗಳಿಂದ ಜೇಣು ವಿಷ ಸಂಗ್ರಹಿಸುವ (Bee Venom) ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಹೌದು..ಕರಾವಳಿ ಭಾಗದಲ್ಲಿ ಜೇನುತುಪ್ಪ ಸಂಗ್ರಹಿಸುವ ಸಾಕಷ್ಟು ಕೃಷಿಕರಿದ್ದರು. ಉಪಉತ್ಪನ್ನವಾದ ಜೇನು ವಿಷ ಸಂಗ್ರಹಿಸುವರಿಲ್ಲ. ಆದ್ರೆ ಮಂಗಳೂರು (Mangalore) ಹೊರವಲಯದ ಕಿನ್ನಿಗೋಳಿಯ ಪ್ರಜ್ವಲ್ ಶೆಟ್ಟಿಗಾರ್ ಜೇನು ವಿಷ ಅಂದ್ರೆ ಬೀ ವೆನಮ್ ಪಡೆಯುವ ಯಂತ್ರವನ್ನು ಸ್ವತ: ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ (Success Story). ಪ್ರಜ್ವಲ್ ಅವರು ವಿವಿಧ ಪ್ರದೇಶಗಳಲ್ಲಿ ವಿಷ ಸಂಗ್ರಹ, ನೊಣಗಳ ಚಟುವಟಿಕೆ, ಸಂಗ್ರಹಿಸಿದ ವಿಷವನ್ನು ಫ್ರೀಝರ್‌ನಲ್ಲಿ ಕಾಪಾಡುವ ಅಧ್ಯಯನ ಮಾಡಿ ಪರಿಪೂರ್ಣವಾಗಿ ಯಶಸ್ಸು ಕಂಡಿದ್ದಾರೆ. ಸದ್ಯ ಐದು ರೀತಿಯ ಬೀ ವೆನಮ್ ಎಕ್ಸ್‌ಟ್ರಾಕ್ಟರ್ ರೆಡಿ ಮಾಡಿದ್ದಾರೆ.
ಜೇನು ಪೆಟ್ಟಿಗೆಯ ಮುಂಭಾಗ ನೋಣಗಳ ಓಡಾಟ ದ್ವಾರದಲ್ಲಿ ವಿಷ ಸಂಗ್ರಹಿಸುವ ಪ್ಲೇಟ್ ಇಟ್ಟು ಬ್ಯಾಟರಿ ಮೂಲಕ ಸಣ್ಣ ವೋಲ್ವೇಜ್‌ನಲ್ಲಿ ವಿದ್ಯುತ್ ಪ್ರವಹಿಸಲಾಗುತ್ತದೆ. ನೊಣಗಳು ಪ್ಲೇಟ್ ಮೇಲೆ ಕೂತಾಗ ವೈಬ್ರೇಶನ್‌ಗೊಳಗಾಗಿ ವಿಷ ಕೊಂಡಿಯಿಂದ ಗಾಜಿನ ಪ್ಲೇಟ್ ಮೇಲೆ ಕುಟುಕುತ್ತವೆ. ಆ ವೇಳೆ ವಿಷ ಗಾಜಿನ ಮೇಲೆ ಸಂಗ್ರಹವಾಗುತ್ತದೆ. ತಕ್ಷಣವೇ ಅದನ್ನು ಷೆವಿಂಗ್ ರೇಜರ್ ನಿಂದ ಸಂಗ್ರಹಿಸಲಾಗುತ್ತದೆ.
ಈ ಜೇನು ವಿಷ ಪದಾರ್ಥವು ಔಷಧದ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಉತ್ತಮ ಬೇಡಿಕೆ ಇದೆ. ಬೃಹತ್ ಔಷಧ ಕಂಪನಿಗಳು ದೊಡ್ಡ ಮೊತ್ತ ನೀಡಿ ಖರೀದಿಸುತ್ತವೆ. ಪುಣೆ, ದೆಹಲಿ, ಮಹಾರಾಷ್ಟ್ರದಲ್ಲಿ ವಿಷ ಸಂಗ್ರಹ ನಡೆಯುತ್ತಿದೆ. ಆದ್ರೆ ಕರ್ನಾಟಕದಲ್ಲಿ ರೈತರಿಗೆ ಅಷ್ಟೊಂದು ಮಾಹಿತಿ ಇಲ್ಲ ಅನ್ನುತ್ತಾರೆ ಪ್ರಜ್ವಲ್ ಶೆಟ್ಟಿಗಾರ್.
ವಿಷ ಸಂಗ್ರಹದ ಪ್ಲೇಟ್‌ಗೆ ಮಾರುಕಟ್ಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಇದು ಮೆಲ್ಲಿಫೆರಾ ತಳಿಗೆ ಮಾತ್ರ ಆಗುವಂತದ್ದು. ಆದ್ರೆ ಕರಾವಳಿ ಮಲೆನಾಡು ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಇರುವುದು ಸೆರೆನಾ ತಳಿ. ಹೀಗಾಗಿ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸ್ವಂತ ಪ್ರಯೋಗದಲ್ಲಿ ತೊಡಗಿ ಪ್ರಜ್ವಲ್ ಯಶಸ್ವಿಯಾಗಿದ್ದಾರೆ.
ವರದಿ: ಅಶೋಕ್, ಟಿವಿ 9, ಮಂಗಳೂರು