ಬಂಟ್ವಾಳ: ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ

ಬಿಸಿಲೆ ಘಾಟ್ ಅಪಘಾತದ ಗಾಯಾಳುಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ಬೈಕ್ ಸವಾರನೊಬ್ಬ ಮಂಗಳೂರಿನಲ್ಲಿ ದಾರಿ ಬಿಡದೆ ಅಡ್ಡಿಪಡಿಸಿದ್ದ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ಬೈಕ್ ಸವಾರನನ್ನು ಬಂಧಿಸಿದ್ದಾರೆ. ಬಂಟ್ವಾಳ ನ್ಯಾಯಾಲಯವು ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಕಾರಣ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಟ್ವಾಳ: ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ
ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ಎಚ್ಚರಿಕೆ
Updated By: ಭಾವನಾ ಹೆಗಡೆ

Updated on: Nov 01, 2025 | 11:33 AM

ಬಂಟ್ವಾಳ , ನವೆಂಬರ್ 1: ಬಿಸ್ಲೆ ಘಾಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ (Ambulance) ದಾರಿ ಬಿಡದ ಬೈಕ್ ಸವಾರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆಂಬುಲೆನ್ಸ್ ಸಿಬ್ಬಂದಿ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಹಿನ್ನೆಲೆ ಬೈಕ್ ಸವಾರನಿಗೆ ಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ.

ಆಂಬುಲೆನ್ಸ್‌ಗೆ ದಾರಿ ಬಿಡದ ಬೈಕ್ ಸವಾರನ ದುಸ್ಸಾಹಸ

ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಮ್ಯಾಕ್ಸಿಕ್ಯಾಬ್ ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸ್ಲೆ ಘಾಟ್​ನಲ್ಲಿ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಎತ್ತರದಿಂದ ಪಲ್ಟಿಯಾದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ತುರ್ತುವಾಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಆಂಬುಲೆನ್ಸ್‌ಗೆ ದಾರಿ ಬಿಡದೆ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ಎಂಬ ಬೈಕ್ ಸವಾರ ಅಡ್ಡಗಟ್ಟಿದ್ದ. ಸುಮಾರು 3–4 ಕಿಲೋಮೀಟರ್‌ಗಳಷ್ಟು ಹಠದಿಂದ ಹಿಂಬಾಲಿಸಿ, ಗಾಯಾಳುಗಳಿದ್ದ ಆಂಬಯಲೆನ್ಸ್​ಗೆ ಸಮಸ್ಯೆ ನೀಡಿದ್ದ. ಆಂಬುಲೆನ್ಸ್ ಸಿಬ್ಬಂದಿ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.

ಬೈಕ್ ಸವಾರನಿಗೆ ನ್ಯಾಯಾಂಗ ಬಂಧನ

ವೀಡಿಯೊ ಆಧರಿಸಿ ಬಂಟ್ವಾಳ ನಗರ ಪೊಲೀಸರು ಮನ್ಸೂರನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೊಪ್ಪಿಸಿದ್ದಾರೆ. ತುರ್ತು ಸೇವೆಗೆ ಅಡ್ಡಿ ಮಾಡಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಬಂಟ್ವಾಳ JMFC ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ತುರ್ತು ಸೇವೆಗಳನ್ನು ತಡೆದು ಸಾರ್ವಜನಿಕ ಸುರಕ್ಷತೆಯನ್ನು ಲೆಕ್ಕಿಸದವರ ವಿರುದ್ಧ ಕಾನೂನು ಬಿಗಿಯಾದ ಕ್ರಮ ಕೈಗೊಳ್ಳುತ್ತಿರುವುದು ಈ ಪ್ರಕರಣದಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಜನರು ಮಾನವೀಯತೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:06 am, Sat, 1 November 25