ಬಿಜೆಪಿ, ಕಾಂಗ್ರೆಸ್​ ಸರ್ಕಾರ ಈವರೆಗೆ 1 ಪೈಸೆ ಪರಿಹಾರ ನೀಡಿಲ್ಲ, ಇದರಲ್ಲೂ ತಾರತಮ್ಯ ಏಕೆ: ಶರತ್​ ಮಡಿವಾಳ ತಂದೆ ಆರೋಪ

ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಆದ ಬೆನ್ನೆಲೆ, ತಮಗೂ ಪರಿಹಾರ ನೀಡುವಂತೆ 2017ರ ಜು.7ರಂದು ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಶರತ್ ಮಡಿವಾಳ ತಂದೆ ತನಿಯಪ್ಪ ಮನವಿ ಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್​ ಸರ್ಕಾರ ಈವರೆಗೆ 1 ಪೈಸೆ ಪರಿಹಾರ ನೀಡಿಲ್ಲ, ಇದರಲ್ಲೂ ತಾರತಮ್ಯ ಏಕೆ: ಶರತ್​ ಮಡಿವಾಳ ತಂದೆ ಆರೋಪ
ತಂದೆ ತನಿಯಪ್ಪ, ಶರತ್ ಮಡಿವಾಳ

Updated on: Jun 17, 2023 | 5:22 PM

ಮಂಗಳೂರು: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರಿಗೆ ರಾಜ್ಯ ಸರ್ಕಾರ ಶುಕ್ರವಾರ ತಲಾ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ 2017ರ ಜು.7ರಂದು ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಶರತ್ ಮಡಿವಾಳ (sharath madiwala) ರಿಗೆ ಯಾವುದೇ ಪರಿಹಾರ ನೀಡಿಲ್ಲ. ಇದರಲ್ಲಿಯೂ ತಾರತಮ್ಯ ಧೋರಣೆ ಅನುಸರಿಲಾಗುತ್ತಿದೆ ಎಂದು ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಆರೋಪ ಮಾಡಿದ್ದಾರೆ.

ಮಗನ ಸಾವಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲವೆಂದು ಕೊರಗುತ್ತಿರುವ ತಂದೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್​ನಲ್ಲಿ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ದಾಳಿ ಮಾಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ RSS ಕಾರ್ಯಕರ್ತ ಶರತ್ ಮಡಿವಾಳ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 7 ರಂದು ಕೊನೆಯುಸಿರೆಳೆದಿದ್ದ. ಇಂದಿಗೂ ತನಿಯಪ್ಪ ಮಡಿವಾಳ (74) ಲಾಂಡ್ರಿಯಲ್ಲಿ ದುಡಿಯುತ್ತಿದ್ದ, ಮಗನ ಸಾವಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲವೆಂದು ಕೊರಗುತ್ತಿದ್ದಾರೆ.

ಇದನ್ನೂ ಓದಿ: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ 4 ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

1 ಪೈಸೆ ಪರಿಹಾರ ನೀಡಿಲ್ಲ

ಶರತ್ ಮಡಿವಾಳ ಹತ್ಯೆಯಾಗಿ ಇಷ್ಟು ವರ್ಷಗಳಾದರೂ ಬಿಜೆಪಿ ಅಥವಾ ಕಾಂಗ್ರೆಸ್​ ಸರ್ಕಾರ ಈವರೆಗೆ 1 ಪೈಸೆ ಪರಿಹಾರ ನೀಡಿಲ್ಲ. ನಮ್ಮ ಸಮಸ್ಯೆ, ಕಷ್ಟಗಳಿಗೆ ಯಾವುದೇ ಸರ್ಕಾರ ಸ್ಪಂದಿಸಿಲ್ಲವೆಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನ ಮಗನನ್ನು ಕೊಲೆ ಮಾಡಿಸಿದ್ದು ರಮಾನಾಥ ರೈ – ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ಆರೋಪ

ನನ್ನ ಮಗನ ಹತ್ಯೆ ಪ್ರಕರಣದಲ್ಲಿ ಸರಿಯಾಗಿ ತನಿಖೆಯಾಗಿಲ್ಲ. ಪ್ರಕರಣದ ತನಿಖೆಯನ್ನು ಎನ್​ಐಎ ಅಥವಾ ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರ ನಮ್ಮ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಒತ್ತಾಯಿಸಿದ್ದಾರೆ.

ಕರಾವಳಿಯಲ್ಲಿ ಕೋಮುದ್ವೇಷಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:21 pm, Sat, 17 June 23