ಹೊಳೆಯಲ್ಲಿ ಮುಳುಗಿ ಬಿಜೆಪಿ ಮುಖಂಡ ದುರ್ಮರಣ, ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರಿಂದ ಅಂತಿಮ ನಮನ
ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮಂಗಳೂರು: ಸುಳ್ಯದ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನವೀನ್ ರೈ (52)ಮೇನಾಲ ಗುರುವಾರ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ನವೀನ್ ತುದಿಯಾಡ್ಕ ಬಳಿ ಇರುವ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ಪಂಪ್ ಸ್ಟಾರ್ಟ್ ಆಗದ ಕಾರಣ ಫುಟ್ವಾಲ್ನಲ್ಲಿ ಏನೋ ಸಮಸ್ಯೆ ಇದೆಯಂದು ಪರಿಶೀಲಿಸಲು ನದಿಗೆ ಇಳಿದಿದ್ದರು. ಆ ಸಂದರ್ಭದಲ್ಲಿ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನವೀನ್ ರೈ ಯವರ ಮನೆ ಮೇನಾಲದಲ್ಲಿದ್ದು, ಪಕ್ಕದಲ್ಲಿಯೇ ಕೃಷಿ ತೋಟವಿದೆ. ಅದರ ಇನ್ನೊಂದು ಪಾಶ್ರ್ವದಲ್ಲಿ ಪಯಸ್ವಿನಿ ಹೊಳೆಗೆ ನೀರಿನ ಪಂಪ್ ಅಳವಡಿಲಾಗಿದ್ದು, ಅಲ್ಲಿಗೆ ತುದಿಯಡ್ಕ ಮೂಲಕ ಸಾಗಬೇಕಾಗಿದೆ. ನವೀನ್ ರೈಯವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಅದರಂತೆ ಗುರುವಾರ ಗಿರಿಜಾಶಂಕರ್ ತುದಿಯಡ್ಕ ಅವರ ಮನೆಯ ಬಳಿ ಬೈಕ್ ನಿಲ್ಲಿಸಿ ಪುಟ್‌ವಾಲ್‌ನಲ್ಲಿರುವ ಕಸ ತೆಗೆಯಲೆಂದು ಅಲ್ಲಿಗೆ ಹೋಗಿದ್ದರು. ನದಿಯ ದಡದಲ್ಲಿ ಮೊಬೈಲ್, ವಾಚ್ ಮತ್ತಿತರ ಸಾಮಾನುಗಳನ್ನಿರಿಸಿ ನದಿಗಿಳಿದಿದ್ದರು. ಬಹಳ ಹೊತ್ತಾದರೂ ನವೀನ್ ರೈಯವರು ಮರಳಿ ಬಾರದ್ದರಿಂದ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಗಿರಿಜಾಶಂಕರ್ ಅವರ ಪತ್ನಿಗೆ ವಿಷಯ ತಿಳಿಸಿದ್ದಾರೆ.
ಸುಳ್ಯದ ಸಭೆಯೊಂದರಲ್ಲಿದ್ದ ಗಿರಿಜಾಶಂಕರ್‌ರವರಿಗೆ ಪತ್ನಿ ಕೂಡಲೇ ಬರುವಂತೆ ಮಾಡಿದ್ದರು. ಅದಾಗಲೇ ನವೀನ್ ರೈ ನಾಪತ್ತೆಯಾಗಿರುವ ವಿಚಾರ ಪ್ರಚಾರಗೊಂಡಿತ್ತು. ಪೈಚಾರಿನ ಮುಳುಗು ತಜ್ಞರಿಗೂ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮುಳುಗು ತಜ್ಞರಾದ ಆರ್.ಬಿ.ಬಶೀರ್, ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ಲತೀಫ್ ಟಿ.ಎ. ಮೊದಲಾದವರು ಹೊಳೆಗಿಳಿದು ಅರ್ಧ ಗಂಟೆ ಶೋಧ ನಡೆಸಿದಾಗ ಸ್ವಲ್ಪ ದೂರದ ಆಳದಲ್ಲಿ ನವೀನ್ ರೈಯವರ ಮೃತದೇಹ ಪತ್ತೆಯಾಗಿದೆ.
ಬಳಿಕ ಸುಳ್ಯದ ಸರ್ಕಾರಿ ಆಸ್ಪತ್ರೆತಲ್ಲಿ ಮೃತ ದೇಹದ ಪೋಸ್ಟ್ ಮಾರ್ಟಂ ಬಳಿಕ ಅಂಬ್ಯುಲೆನ್ಸ್ನಲ್ಲಿ ಮೇನಾಲದ ಮನೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಬಿಜೆಪಿ ಕಚೇರಿ ಬಳಿ ನಿಲ್ಲಿಸಲಾಯ್ತು. ಈ ವೇಳೆ ಕಾರ್ಯಕರ್ತರು ನವೀನ್ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ಪ್ರಭಾವಿ ಬಿಜೆಪಿ ಮುಖಂಡರಾಗಿರುವ ನವೀನ್ ರೈ ಮೇನಾಲ ಜಾಲ್ಸೂರು ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯರು. ಅಜ್ಜಾವರ ಗ್ರಾ.ಪಂ.ನ ಮಾಜಿ ಸದಸ್ಯರು. ಕಲ್ಲಿನ ಕೋರೆಯನ್ನು ಕೂಡಾ ಹೊಂದಿದ್ದು, ಉದ್ಯಮಿಯಾಗಿಯೂ ಪ್ರಸಿದ್ಧರಾಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದರು.