ಕಡಬ: ಕಾರು ಹಾಗೂ ತೂಫಾನ್ ವಾಹನ ಮುಖಾಮುಖಿ ಡಿಕ್ಕಿಯಾದ (Accident) ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ (Kadaba) ತಾಲೂಕಿನ ನೆಟ್ಟಣ ಸಮೀಪದ ಬಿಳಿನೆಲೆ (Bilinele) ಎಂಬಲ್ಲಿ (ಕುಕ್ಕೆ ಸುಬ್ರಹ್ಮಣ್ಯ ಸಮೀಪ) ಮಂಗಳವಾರ ಸಂಭವಿಸಿದೆ. ಭೀಕರ ಅಪಘಾತದ ಪರಿಣಾಮ ಕಾರಿನಲ್ಲಿದ್ದ ಮಗು, ಮಹಿಳೆ ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಬೇಲೂರಿನಿಂದ ಸುಬ್ರಹ್ಮಣ್ಯ ಕಡೆಗೆ ಪ್ರಯಾಣಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿಯಾಗಿದೆ. ತೂಫಾನ್ ವಾಹನ ಹಾಸನ ಮೂಲದ್ದು ಎನ್ನಲಾಗಿದೆ. ತೂಫಾನ್ನಲ್ಲಿ ಪ್ರಯಾಣಿಸುತ್ತಿದ್ದವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ 6 ಮಂದಿ ಮೃತಪಟ್ಟ ಘಟನೆ ಏಪ್ರಿಲ್ 14ರಂದು ಮಾಣಿ-ಮೈಸೂರು ಹೆದ್ದಾರಿಯ ಸಂಪಾಜೆ ಬಳಿ ಸಂಭವಿಸಿತ್ತು. ಮಂಡ್ಯ ಜಿಲ್ಲೆಯ ಮದ್ದೂರಿನ ಆರು ಮಂದಿ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಸಂಪಾಜೆ: ಸರ್ಕಾರಿ ಬಸ್ ಡಿಕ್ಕಿ, ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರ ದುರ್ಮರಣ
ಅದೇ ದಿನ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿತ್ತು. ಈ ಘಟನೆಗಳ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Tue, 18 April 23