ದಕ್ಷಿಣ ಕನ್ನಡ: ಇವತ್ತಿನ ಕಾಂಗ್ರೆಸ್ (Congress) ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ಕಾಂಗ್ರೆಸ್ ಅಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಇತ್ತಾ? ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಮಂಗಳೂರಿನಲ್ಲಿ (Mangalore) ಹೇಳಿದ್ದಾರೆ. ಮಂಗಳೂರಿನ ಸಾವರ್ಕರ್ ‘ಚಿಂತನ ಗಂಗಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇವರು ಮೂಲ ಕಾಂಗ್ರೆಸ್ ಅಂತ ಹೇಳಿದರೇ ಈ ಪ್ರಶ್ನೆ ಕೇಳಿ. ಆವತ್ತಿನ ಕಾಂಗ್ರೆಸ್ನ್ನು 1975ರ ನಂತರ ಇಂದಿರಾ ಗಾಂಧಿ ಪ್ರತ್ಯೇಕ ಕಾಂಗ್ರೆಸ್ (ಐ) ಅಂತ ಮಾಡಿದ್ದರು ಎಂದು ತಿಳಿಸಿದರು.
ಆದರೆ ಕಾಲಕ್ರಮೇಣ ಅದನ್ನೇ ಸ್ವಾತಂತ್ರ್ಯ ಸಂದರ್ಭದ ಕಾಂಗ್ರೆಸ್ ಅಂತ ಹೇಳಿಕೊಳ್ಳಲಾಯಿತು. ಕಾಲಕ್ರಮೇಣದಲ್ಲಿ ಇವರೇ ಇದನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಹೇಳಿದರು. ಐ ಕಾಂಗ್ರೆಸ್ ಇವತ್ತು ದೇಶದಲ್ಲಿರೋದು ಬಿಟ್ಟರೆ ಸ್ವಾತಂತ್ರ್ಯದ ಹೋರಾಟದ ಕಾಂಗ್ರೆಸ್ ಅಲ್ಲ ಎಂದು ತಿರುಗೇಟು ನೀಡಿದರು.
1885 ರಲ್ಲಿ ಎ.ಓ.ಹ್ಯೂಮ್ ಅನ್ನೋ ಬ್ರಿಟಿಷ್ ಅಧಿಕಾರಿ ಮೊದಲ ಕಾಂಗ್ರೆಸ್ ಹುಟ್ಟು ಹಾಕಿದರು. ಆದರೆ ಈಗ ಇರೋ ಕಾಂಗ್ರೆಸ್ ಸ್ವಾತಂತ್ರ್ಯದ ಹೊತ್ತಲ್ಲಿ ಇದ್ದ ಕಾಂಗ್ರೆಸ್ ಅಲ್ಲ. ಮಾಜಿ ಪ್ರಧಾನಿ ಜವಾಹಾರ್ ನೆಹರೂ ಜೀವನದಲ್ಲಿ ಒಂದೇ ಒಂದು ಬಾರಿ ನಿಜವಾಗಿ ಜೈಲಿನಲ್ಲಿದ್ದರು. ಅವರ ಅಪ್ಪ ಕ್ಷಮೆ ಪತ್ರ ಬರೆದು ಗೋಗರೆದು ಮಗನನ್ನ ಬಿಡಿಸಿಕೊಂಡರು. ಕೇವಲ ಹನ್ನೊಂದು ದಿನಗಳ ಶಿಕ್ಷೆಗೆ ಅವರು ಗೋಗರೆದಿದ್ದರು. ಸಾವರ್ಕರ್ ಮಾತ್ರ ಕ್ಷಮಾಪಣೆ ಪತ್ರ ಬರೆದಿದ್ದಾರೆ ಅಂತ ಹೇಳೋರು ಮೂರ್ಖರು ಎಂದು ವಾಗ್ದಾಳಿ ಮಾಡಿದರು.
ಸಾವರ್ಕರ್ ರಂತೆ ಸಾವಿರಾರು ರಾಜಕೀಯ ಖೈದಿಗಳು ಆ ಜೈಲಿನಲ್ಲಿ ಇದ್ದರು. ಅಲ್ಲಿದ್ದ ಬಹುತೇಕ ಖೈದಿಗಳು ಕ್ಷಮಾಪಣೆ ಪತ್ರ ಬರೆದಿದ್ದರು. ಇದೊಂದು ನ್ಯಾಯಾಲಯಕ್ಕೆ ಬರೆಯುವ ಮೆರ್ಸಿ ಪಿಟಿಷನ್. ರಾಜಕೀಯ ಖೈದಿಗಳು ಪತ್ರ ಬರೆದು ಕ್ಷಮೆ ಕೇಳೋದು ಕೋರ್ಟ್ನಲ್ಲಿ ವಾದ ಮಾಡಿದಂತೆ. ಯಾರನ್ನು ಜೈಲಿನಿಂದ ಬಿಡಬೇಕು ಅಂತ ಈ ಪಿಟಿಷನ್ ಆಧಾರದಲ್ಲಿ ಬಿಡಲಾಗುತ್ತಿತ್ತು. ಆದರೆ ಇದರಲ್ಲಿ ಸಾವರ್ಕರ್ ಅವರ ಕ್ಷಮೆ ಪತ್ರ ಮಾತ್ರ ತಿರಸ್ಕೃತ ಅಂತ ಉತ್ತರ ಬಂದಿತ್ತು ಎಂದು ತಿಳಿಸಿದ್ದಾರೆ.
ಇನ್ಯಾರಿಗೂ ಕೊನೆವರೆಗೂ ಯಾವುದೇ ಉತ್ತರ ಬರಲೇ ಇಲ್ಲ. ನೆಹರು ತನಗೆ ತಾನೇ ಬಿರುದು ಕೊಟ್ಟುಕೊಂಡಿದ್ದು ಚಾಚಾ ಅಂತ. ಆದರೆ ಸಾವರ್ಕರ್ಗೆ ಮಾತ್ರ ವೀರ ಅನ್ನೋ ಬಿರುದು ಸಿಕ್ಕಿದೆ. ಹಿಂದುತ್ವ ಅನ್ನೋ ಪದದ ಕೊಡುಗೆ ಸಾವರ್ಕರ್ರದ್ದು. ಮುಸಲ್ಮಾನ, ಕ್ರಿಶ್ಚಿಯನ್ಗೆ ಈ ಭಾರತ ಪಿತೃಭೂಮಿ, ಅಖಂಡ ಭಾರತ ಅಂತ ಕಂಡರೆ ಆತನೂ ಹಿಂದುವೇ. ಇಂಥದ್ದೊಂದು ಅದ್ಭುತ ಹಿಂದುತ್ವದ ಕಲ್ಪನೆಯನ್ನ ಸೃಷ್ಟಿಸಿದ್ದು ಸಾವರ್ಕರ್ ಎಂದು ಹೇಳಿದರು.
ಸಾವರ್ಕರ್ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಹಿಂದೂ ಧರ್ಮಕ್ಕಾಗಿ ಹೆಗಲು ಕೊಟ್ಟವರು. ಗಾಂಧಿ ಹತ್ಯೆ ನಾಥೋರಾಮ್ ಗೋಡ್ಸೆ ಮಾಡಿದ ಕಾರಣಕ್ಕೆ ಸಾವರ್ಕರ್ ಆರೋಪಿ ಮಾಡಲಾಯಿತು. ಗೋಡ್ಸೆಗೆ ಸಾವರ್ಕರ್ ಪರಿಚಯ ಇತ್ತು ಅಂತ ಹೀಗೆ ಮಾಡಲಾಯ್ತು. ಆದರೆ ಸ್ವತಃ ಗೋಡ್ಸೆಯೇ ಈ ಹತ್ಯೆಯಲ್ಲಿ ಸಾವರ್ಕರ್ ಇಲ್ಲ ಅಂತ ಹೇಳಿದ್ದ. ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಹಾಕಬಾರದು ಅನ್ನೋದು ಯಾವ ದಾಷ್ಟ್ಯ? ಯಾರೇ ಬೈದರೂ ನಾವು ಸಾವರ್ಕರ್ ವಿಚಾರಗಳನ್ನು ಮನೆ ಮನೆಗೂ ಮುಟ್ಟಿಸುತ್ತೇವೆ ಎಂದರು.
ಈ ಬಾರಿಯ ಚೌತಿ ಸಾವರ್ಕರ್ ಚೌತಿ ಆಗಲಿದೆ. ಸಾವರ್ಕರ್ ಬಗ್ಗೆ ಪುಸ್ತಕ ಮಾಡಿದ್ದೇವೆ, ಪ್ರಿಂಟ್ ಆದ ಬಗ್ಗೆ ಇವತ್ತು ಅನೌನ್ಸ್ ಮಾಡಿದ್ದೇವೆ. ಆದರೆ ಒಂದೇ ದಿನದಲ್ಲಿ 75 ಸಾವಿರ ಪುಸ್ತಕ ಸೋಲ್ಡ್ ಔಟ್ ಆಗಿದೆ ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Tue, 23 August 22