ಮಂಗಳೂರು: ಗುಂಡಿಗಳಿಂದ ತುಂಬಿ ತುಳುಕುವ ರಸ್ತೆಗಳ ಶೋಚನೀಯ ಪರಿಸ್ಥಿತಿ ಬಗ್ಗೆ ನಿನ್ನೆಯಷ್ಟೇ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿತ್ತು. ನೀವು ಸಾಲ ಮಾಡಿ ಅಥವಾ ಕಳ್ಳತನನಾದ್ರೂ ಮಾಡಿ. ಆದ್ರೆ ಮೊದಲು ಮೂಲ ಸೌಕರ್ಯ ಕಲ್ಪಿಸಿ ಎಂದು ಸರ್ಕಾರದ ಆದ್ಯ ಕರ್ತವ್ಯವನ್ನು ನೆನಪಿಸಿತ್ತು. ಈ ಮಧ್ಯೆ ಕರಾವಳಿ ಜಿಲ್ಲೆಯಲ್ಲೂ ರಸ್ತೆಗಳು ಸಮುದ್ರಗಳಂತೆ ಭಾಸವಾಗುತ್ತಿರುವ ಬಗ್ಗೆ ಕೋರ್ಟ್ ನ್ಯಾಯಾಧೀಶರು ಗರಂ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಮುಡಾಯಿ ತೋಟ ಎಂಬಲ್ಲಿ ರಸ್ತೆಗಳು ಕೆಸರು ಮಯವಾಗಿದ್ದು ಪುಟಾಣಿ ಮಕ್ಕಳು ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಹಾರೆ ಹಿಡಿದು ಕೆಸರುಮಯ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸುಳ್ಯ ನ್ಯಾಯಾಲಯದ ನ್ಯಾಯಾಧೀಶರು ಗರಂ ಆಗಿದ್ದಾರೆ. ಮಕ್ಕಳ ಪೋಷಕರು, ಬೆಳ್ಳಾರೆ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶ ಸೋಮಶೇಖರ್, ಮಕ್ಕಳ ಪೋಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ. ಬೆಳ್ಳಾರೆ ಪಂಚಾಯಿತಿಗೂ ತೆರಳಿ ಪಂಚಾಯತ್ ಅಧ್ಯಕ್ಷ ಮತ್ತು ಪಿಡಿಓಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ರಸ್ತೆ ದುರಸ್ತಿ ಮಾಡದ ಪಂಚಾಯಿತಿ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಪೋಷಕರ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದಾರೆ. ಫೋಟೋ ವೈರಲ್ ಮಾಡಿದವರ ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಕೊನೆಗೆ ಪಂಚಾಯಿತಿ ಅಧಿಕಾರಿಗಳ ಮನವಿ ಹಿನ್ನೆಲೆ ತಕ್ಷಣ ರಸ್ತೆ ದುರಸ್ತಿಗೆ ಸೂಚಿಸಿದ್ದು ತಕ್ಷಣ ರಸ್ತೆಯ ಕೆಸರು ತೆಗೆದು ಫೋಟೋ ಸಹಿತ ವರದಿ ಸಲ್ಲಿಸಲು ಜಡ್ಜ್ ಸೂಚಿಸಿದ್ದಾರೆ. ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದವರ ಮತ್ತು ಫೋಟೋ ತೆಗೆದು ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್
Published On - 11:28 am, Tue, 26 October 21