ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆ ಪ್ರಕರಣ ಸಂಬಂಧ ಅರೆಸ್ಟ್ ಆದ ಇಬ್ಬರು ಆರೋಪಿಗಳಿಗೆ ಆಗಸ್ಟ್ 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಪುತ್ತೂರಿನ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಇನ್ನು ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai) ಹತ್ಯೆಯಾದ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಅಷ್ಟೇ ಅಲ್ಲದೆ, ರಾಜ್ಯಾದ್ಯಂತ ಎದ್ದಿರೋ ಆಕ್ರೋಶವನ್ನ ತಣ್ಣಗೆ ಮಾಡೋ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಮಾದರಿಯಲ್ಲಿ ಕಠಿಣ ಕಾನೂನಿನ ಭರವಸೆಯನ್ನೂ ನೀಡಿದ್ದಾರೆ.
ಪ್ರವೀಣ್ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ
ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಈ ಸಂಭ್ರಮಾಚರಣೆಯಲ್ಲಿರಬೇಕಿದ್ದ ಸಿಎಂ, ಪ್ರವೀಣ್ ಹತ್ಯೆಗೆ ಸಂತಾಪ ಸೂಚಿಸುವ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆಗಿದ್ದರು.
ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದ ಸಿಎಂ
ಇನ್ನು ಸಿಎಂ ಬೊಮ್ಮಾಯಿ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ನೀಡಿ ಪ್ರವೀಣ್ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ನಿಮ್ಮೊಂದಿಗಿದೆ ಎಂದು ಸಿಎಂ ಅಭಯ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಇದು ಕೊಲೆ ಮಾತ್ರವಲ್ಲ, ದೇಶದ್ರೋಹದ ಕೆಲಸ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆಯಾಗುತ್ತಿದೆ. ಅತಿ ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಇದನ್ನು ಕೇವಲ ಒಂದು ಕೊಲೆ ಪ್ರಕರಣವಾಗಿ ನೋಡುವುದಿಲ್ಲ. ರಾಜ್ಯದಲ್ಲಿ ವಿಶೇಷವಾಗಿ ಮಂಗಳೂರು ಭಾಗಕ್ಕೆ NIA ಅಗತ್ಯ ವಿದೆ. ಅಗತ್ಯಬಿದ್ದರೆ ಪ್ರವೀಣ್ ಕೊಲೆ ಕೇಸ್‌ನ ತನಿಖೆ NIAಗೆ ವಹಿಸ್ತೇವೆ. ಹತ್ಯೆಗೆ ಬೆಂಬಲ ನೀಡಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದರು.