ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಕೋವಿಡ್ ಪ್ರಕರಣ, ದಕ್ಷಿಣ ಕನ್ನಡದವರಿಗೆ ಆತಂಕ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ

| Updated By: ಗಣಪತಿ ಶರ್ಮ

Updated on: Dec 21, 2023 | 10:32 AM

ಕೇರಳ ಗಡಿಯಲ್ಲಿ ಕಡ್ಡಾಯ ತಪಾಸಣೆ ನಡೆಸಲಾಗುತ್ತಿಲ್ಲ. ಆದರೆ, ಆರೋಗ್ಯ ಸಿಬ್ಬಂದಿ ಮಾಹಿತಿ ಕೊಡುತ್ತಾರೆ. ಸ್ವರ್ಗ, ಸಾರಡ್ಕ, ಜಾಲ್ಸೂರು, ತಲಪಾಡಿ, ಈಶ್ವರಮಂಗಲದಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಆದರೆ, ಕೇರಳದ ಗಡಿಭಾಗವಾಗ ಈ ಐದು ಕಡೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಕೋವಿಡ್ ಪ್ರಕರಣ, ದಕ್ಷಿಣ ಕನ್ನಡದವರಿಗೆ ಆತಂಕ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಡಿಸೆಂಬರ್ 21: ಕೇರಳ ರಾಜ್ಯದಲ್ಲಿ ಕೋವಿಡ್ (Covid 19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಗಡಿಭಾಗವಾದ ಕಾರಣ ಕೇರಳದಿಂದ ಹಲವರು ಮಂಗಳೂರಿಗೆ ಬರುತ್ತಿರುತ್ತಾರೆ. ನಮಗೆ ಸರ್ಕಾರದಿಂದ ಕೆಲ ಮಾರ್ಗಸೂಚಿ ಬಂದಿದೆ. ಅದರಂತೆ ದ.ಕ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಯಾರೂ ಕೂಡ ಆತಂಕ ಮತ್ತು ಅನಗತ್ಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಅವರು ಹೇಳಿದ್ದಾರೆ.

ಗಡಿ ಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲ. ಸದ್ಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ಕೊಡಲಾಗಿದೆ. ಆಕ್ಸಿಜನ್ ಬೆಡ್​​ಗಳು, ಐಸಿಯು, ವೆಂಟಿಲೇಟರ್ ಸಿದ್ದವಾಗಿಡಲು ಸೂಚಿಸಲಾಗಿದೆ ಎಂದು ತಿಮ್ಮಯ್ಯ ತಿಳಿಸಿದ್ದಾರೆ.

ಕೇರಳ ಗಡಿಯಲ್ಲಿ ಕಡ್ಡಾಯ ತಪಾಸಣೆ ನಡೆಸಲಾಗುತ್ತಿಲ್ಲ. ಆದರೆ, ಆರೋಗ್ಯ ಸಿಬ್ಬಂದಿ ಮಾಹಿತಿ ಕೊಡುತ್ತಾರೆ. ಸ್ವರ್ಗ, ಸಾರಡ್ಕ, ಜಾಲ್ಸೂರು, ತಲಪಾಡಿ, ಈಶ್ವರಮಂಗಲದಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಆದರೆ, ಕೇರಳದ ಗಡಿಭಾಗವಾಗ ಈ ಐದು ಕಡೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಲ್ಲಿಂದ ಬರುವವರಿಗೆ ನಮ್ಮ ಸಿಬ್ಬಂದಿ ಮೈಕ್ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ

24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, 300 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಕೇರಳದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2341 ಕ್ಕೆ ಏರಿದೆ. ಹೀಗಾಗಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಎಲ್ಲ ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ