ಮಂಗಳೂರು, ಸೆಪ್ಟೆಂಬರ್ 14: ನೆರೆಯ ಕೇರಳ ರಾಜ್ಯದಿಂದ ನಿಫಾ ವೈರಸ್ ಸೋಂಕು ಜಿಲ್ಲೆಗೂ ಹರಡಬಹುದೆಂಬ ಆತಂಕದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಡೆಂಗ್ಯೂ (Dengue) ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ವಿಟ್ಲದಲ್ಲಿ 26 ವರ್ಷದ ಮಹಿಳೆಯೊಬ್ಬರು ಮಂಗಳವಾರ ಶಂಕಿತ ಮೃತಪಟ್ಟಿದ್ದು, ಡೆಂಗ್ಯೂವಿನಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಸಾವಿಗೆ ಡೆಂಗ್ಯೂ ಕಾರಣವೇ ಎಂಬುದು ನಿಖರವಾಗಿ ಇನ್ನಷ್ಟೇ ತಿಳಿದುಬರಬೇಕಿದೆ.
ಈ ಕುರಿತು ಜಿಲ್ಲಾ ಸರ್ವೈಲೆನ್ಸ್ ಅಧಿಕಾರಿ ಡಾ. ನವೀನಚಂದ್ರ ಕುಲಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ರೋಗಿಯಲ್ಲಿ ಡೆಂಗ್ಯೂ ಲಕ್ಷಣಗಳು ಕಂಡುಬಂದಿದ್ದವು. ಇದು ಡೆಂಗ್ಯೂವಿನಿಂದ ಸಂಭವಿಸಿದ ಸಾವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಅವರ ವರದಿಗಳಿಗಾಗಿ ಕಾಯುತ್ತಿದ್ದೇವೆ. ರೋಗಿಗೆ ಆಸ್ಪತ್ರೆಯಲ್ಲಿ ಕೇವಲ ಒಂದು ದಿನ ಮಾತ್ರ ಚಿಕಿತ್ಸೆ ನೀಡಲಾಗಿತ್ತು. ರೋಗಿಯ ಸ್ಥಿತಿ ಗಂಭೀರವಾದ ನಂತರವೇ ಆಸ್ಪತ್ರೆಗೆ ದಾಖಲಾಗಿರುವುದರಿಂದ, ಆಕೆ ಯಾವ ರೀತಿಯ ಜ್ವರದಿಂದ ಬಳಲುತ್ತಿದ್ದಳು ಎಂಬುದು ಇನ್ನೂ ಖಚಿತವಾಗಿಲ್ಲ, ”ಎಂದು ತಿಳಿಸಿದ್ದಾರೆ.
ಜನವರಿಯಿಂದ ಸೆಪ್ಟೆಂಬರ್ 12ರವರೆಗೆ ಜಿಲ್ಲೆಯಲ್ಲಿ 198 ಡೆಂಗೆ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಡಿಮೆ. ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆಯ ಡೆಂಗ್ಯೂ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಮತ್ತು ಕರಾವಳಿಯ ನಡುವೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ವರದಿಯಾದ 198 ಪ್ರಕರಣಗಳಲ್ಲಿ ಬೆಂಗಳೂರಿನಿಂದ ಆಗಮಿಸಿದ ಅನೇಕ ರೋಗಿಗಳು ಇದ್ದಾರೆ. ಕಳೆದ ಎರಡು ತಿಂಗಳಲ್ಲಿ ನಮ್ಮಲ್ಲಿ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 388 ಪ್ರಕರಣಗಳು ವರದಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ.
ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಹೆಚ್ಚಳವಾಗಿದೆ. ಮನೆಯಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವಾಂತಿ-ಜ್ವರಯಿದ್ದರೆ ನಿರ್ಲಕ್ಷಿಸದಿರಿ
ಇದೇ ವೇಳೆ, ಮಲೇರಿಯಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷ 168 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಇದುವರೆಗೆ 54 ಪ್ರಕರಣಗಳು ವರದಿಯಾಗಿವೆ.
ಮತ್ತೊಂದೆಡೆ, ನಿಫಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಕೇರಳದಿಂದ ಬರುವ ತರಕಾರಿ, ಹಣ್ಣುಗಳ ಮೇಲೆ ನಿಗಾ ಇರಿಸಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಸದ್ಯ ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ