Dharamsthala Lakshdeepotsava: ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ, ಮಂಜುನಾಥ ಸ್ವಾಮಿಗೆ ಭಕ್ತರಿಂದ ಅದ್ಧೂರಿ ಪೂಜೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 24, 2022 | 10:48 AM

ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಧಿವೇಶನವು ನಡೆಯಿತು. ಈ ಎಲ್ಲ ಕಾರ್ಯಕ್ರಮವು 23 ಬುಧವಾರದಂದು ಸಂಪನ್ನಗೊಂಡಿದೆ.

Dharamsthala Lakshdeepotsava: ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ, ಮಂಜುನಾಥ ಸ್ವಾಮಿಗೆ ಭಕ್ತರಿಂದ ಅದ್ಧೂರಿ ಪೂಜೆ
Dharamsthala Lakshdeepotsava
Follow us on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ರಾಜ್ಯದ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಈ ಹೆಸರು ಕೇಳಿದರೆ ಸಾಕು ಕೋಟ್ಯಾಂತರ ಭಕ್ತ ಸಮುದಾಯ ಪುಳಕಿತರಾಗುತ್ತಾರೆ. ಮಂಜುನಾಥ ಸ್ವಾಮಿಯ ಮಹಿಮೆಯೇ ಅಂಥಾದ್ದು.. ಭಕ್ತಿಯಿಂದ ಕೈ ಮುಗಿದು ಆರಾಧಿಸೋಕೆ ಅಂತಾನೆ ರಾಜ್ಯ, ದೇಶ, ವಿದೇಶಗಳ ಕೋಟ್ಯಾಂತರ ಜನ ಭಕ್ತರು ಧರ್ಮಸ್ಥಳಕ್ಕೆ ಭೇಟಿ ಕೊಡ್ತಾರೆ. ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನು ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಧಿವೇಶನವು ನಡೆಯಿತು. ಇದಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಸಕಲ ಸಿದ್ಧತೆಗೊಂಡಿದ್ದು, ಈ ಎಲ್ಲ ಕಾರ್ಯಕ್ರಮಕ್ಕೆ ನಿನ್ನೆ ಅಂದರೆ 23 ಬುಧವಾರ ಸಂಪನ್ನಗೊಂಡಿದೆ. ಇಂತಹ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಲಕ್ಷ ದೀಪೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಒಟ್ಟು ಮೂರು ದಿನಗಳ ಕಾಲ ನಡೆಯೋ ಈ ದೀಪೋತ್ಸವ ಸಂಭ್ರಮದ ಅಂಗವಾಗಿ ಸರ್ವ ಧರ್ಮ ಸಮ್ಮೇಳನ ಆಯೋಜಿಸಲಾಗಿತ್ತು.

ಇನ್ನು ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು. ಪ್ರತಿ ನಿತ್ಯ ರಾತ್ರಿ ಬಲಿ ಪೂಜೆ ನಡೆಯೋ ಮೂಲಕ ಮಂಜುನಾಥ ಸ್ವಾಮಿಗೆ ರಾತ್ರಿಯ ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಹೀಗಾಗಿ ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇರೋ ಕಾರಣದಿಂದ ನಿರಂತರ ಅನ್ನ ಸಂತರ್ಪಣೆಯೂ ನಡೆಯಿತ್ತು,

ಮಂಜುನಾಥನ ಕ್ಷೇತ್ರ ಸರ್ವ ಧರ್ಮ ಸಂದೇಶ ಸಾರೋದಕ್ಕೂ ಸಾಕ್ಷಿಯಾಗಿದೆ. ಪ್ರತಿ ನಿತ್ಯವೂ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು ನಡೀತ್ತಿದ್ದು, ಎಂದಿಗಿಂತಲೂ ಎರಡು ಪಟ್ಟು ಹೆಚ್ಚಿನ ಭಕ್ತ ಸಮೂಹ ಕ್ಷೇತ್ರದತ್ತ ಧಾವಿಸ್ತಿದೆ. ಈ ಮಧ್ಯೆ ವಸ್ತು ಪ್ರದರ್ಶನ ಸೇರಿದಂತೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕ್ಷೇತ್ರದಲ್ಲಿ ನಡೆಯಿತು.

ಇದನ್ನು ಓದಿ: ಎತ್ತಿನೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಟೆಕಿ ಕಾಲ್ನಡಿಗೆ; ಮಂಜುನಾಥನಿಗೆ ಹೀಗೊಂದು ಹರಕೆ

ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯೋ ಭಕ್ತರು ಇಲ್ಲಿನ ವೈಭವನ್ನು ಕಣ್ತುಂಬಿಕೊಳ್ಳೋ ಮೂಲಕ ಖುಷಿ ಪಟ್ಟಿದ್ದಾರೆ. ದೂರದ ಊರಿನಿಂದಲೂ ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ, ಪೊಲೀಸರ ಜೊತೆ ಕ್ಷೇತ್ರದ ಸಿಬ್ಬಂದಿಯೂ ಭದ್ರತೆ ಕೆಲಸದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಎಲ್ಲಾ ವ್ಯವಸ್ಥೆ ಭಕ್ತರಲ್ಲಿ ಖುಷಿ ತಂದಿದ್ದು, ಇದರಿಂದಾಗಿಯೇ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚ ತೊಡಗಿತ್ತು. ಜನಸಾಗರ ನಡುವೆ, ಮೂರುದಿನದ ಸಂಭ್ರಮಕ್ಕೆ ಸಾಕ್ಷಿಯಾಗಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಬುಧವಾರ 23ರಂದು ಸಂಪನ್ನಗೊಂಡಿದೆ.

ಧರ್ಮಸ್ಥಳದ ಹಿಂದಿನ ಹೆಸರು ಕುಡುಮ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಮಾರು 8೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು ಕುಡುಮ. ಈ ಪ್ರಾಂತದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮನಿಷ್ಠರಾದ ಸತಿ-ಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ 4 ಮಂದಿ ಅತಿಥಿಗಳು ಬಂದರು. ನೇಮನಿಷ್ಠೆಯಿದ ದಂಪತಿ ಅಥಿತಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಆಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟುಕೊಟ್ಟರು. ಕಾಳರಾಹು, ಕಾಳಕಾಯ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪೆರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

ಮಂಜುನಾಥನ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿ

ಧರ್ಮದೇವತೆಗಳೂ ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಕುಡುಮಕ್ಕೆ ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತ. ಅಂದಿನಿಂದ ಇಲ್ಲಿ ಧರ್ಮ ನೆಲೆ ನಿಂತಿದ್ದಾರೆ. ತಾವೂ ಮಂಜುನಾಥನ ಪೂಜಿಸುತ್ತಾ, ಧರ್ಮರಕ್ಷಣೆಗೆ ತೊಡಗಿದ್ದಾರೆ. ಇಂದೂ ಇಲ್ಲಿ ಧರ್ಮಕಾರ್ಯಗಳು ನಿರಂತರವಾಗಿ ಯಾವ ವಿಘ್ನವೂ ಇಲ್ಲದೆ ಜರುಗುತ್ತವೆ. ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ಸರ್ವಧರ್ಮ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳೂ ನಡೆಯುತ್ತವೆ.

1933ರಿಂದ ಇಲ್ಲಿ ಸರ್ವಧರ್ಮ ಸಾಹಿತ್ಯ ಸಮ್ಮೇಳನವೂ ಜರುಗುತ್ತಾ ಬಂದಿದೆ. ಸುಮಾರು 6೦ ವರ್ಷಗಳ ಹಿಂದೆಯೇ ಸರ್ವಧರ್ಮ ಸಮ್ಮೇಳನ ನಡೆಸಿದ ಕೀರ್ತಿ ಧರ್ಮಸ್ಥಳದ್ದು. ಇದರ ಹಿಂದಿನ ಶಕ್ತಿ ಅಂದಿನ ಧರ್ಮಾಕಾರಿಗಳಾದ ಮಂಜಯ್ಯ ಹೆಗಡೆ ಅವರದ್ದು. ಇದೀಗ ವೀರೇಂದ್ರ ಹೆಗ್ಗಡೆ ಅವರು ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಲಕ್ಷದೀಪೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಪಾದೆಯಾತ್ರೆಯ ಮೂಲಕ ಬಂದು ಸೇವೆ ಮಾಡಿದ್ರು. ಅಲ್ಲದೆ ರೈತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಧಾನ್ಯಗಳನ್ನು ಕಾಣಿಕೆಯಾಗಿ ತಂದು ಒಪ್ಪಿಸಿದ್ರು. ಬೆಂಗಳೂರಿನ ವ್ಯಾಪಾರಿಗಳು ವಿವಿಧ ಹೂಗಳಿಂದ ಕ್ಷೇತ್ರವನ್ನು ಅಲಂಕರಿಸು ಮೂಲಕ ಸೇವೆ ಸಲ್ಲಿಸಲಾಗುತ್ತದೆ

ಜಯಶ್ರೀ. ಸಂಪ

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 am, Thu, 24 November 22