ದೀವಟಿಗೆ ಸಲಾಂ ಪೂಜೆ ನಿಲ್ಲಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ: ಮುಜರಾಯಿ ಇಲಾಖೆಯ ಹೆಸರು ಬದಲಾವಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2022 | 11:23 AM

ಟಿಪ್ಪು ಸುಲ್ತಾನ್ ದೇಗುಲಕ್ಕೆ ರಾತ್ರಿ ಪ್ರದೋಷ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಿ, ಸಲಾಮ್ ಮಾಡಿದ್ದ. ಹೀಗಾಗಿ ಇದಕ್ಕೆ ವಾಡಿಕೆಯಲ್ಲಿ ಸಲಾಂ ಮಂಗಳಾರತಿ ಎಂಬ ಆಡುಮಾತಿನ ರೂಢಿ ಬಂತು. ಅದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಆಗಮಿಕರು ಹೇಳಿದ್ದಾರೆ.

ದೀವಟಿಗೆ ಸಲಾಂ ಪೂಜೆ ನಿಲ್ಲಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ: ಮುಜರಾಯಿ ಇಲಾಖೆಯ ಹೆಸರು ಬದಲಾವಣೆ
ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್
Follow us on

ಮಂಗಳೂರು: ಟಿಪ್ಪು ಸುಲ್ತಾನ್​ (Tipu Sultan) ಕಾಲದ ದೀವಟಿಗೆ ಸಲಾಂ ಪೂಜೆ ಪದ್ಧತಿಯನ್ನು ನಿಲ್ಲಿಸುವಂತೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ. ಟಿಪ್ಪು ರಾಜನಾಗಿದ್ದ ಕಾಲದಿಂದಲೂ ರಾಜ್ಯದ ಹಲವು ಪ್ರಸಿದ್ಧ ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪೂಜೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ದೇಗುಲಗಳಲ್ಲಿಯೂ ಈ ಪದ್ಧತಿ ಇತ್ತು. ಆದರೆ ಮುಂದಿನ ದಿನಗಳಲ್ಲಿ ಸಲಾಂ ಪೂಜೆ ನಡೆಸುವುದು ಬೇಡ. ಅದರ ಬದಲಿಗೆ ಸಂಧ್ಯಾಕಾಲದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸುವಂತೆ ಮುಜರಾಯಿ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ. ರಾಜ, ಮಂತ್ರಿ, ಪ್ರಜೆಗಳ ಒಳಿತಿನ ಸಂಕಲ್ಪದೊಂದಿಗೆ ದೀಪ ನಮಸ್ಕಾರ ಪೂಜೆ ನಡೆಯಲಿದೆ. ಮುಜರಾಯಿ ಇಲಾಖೆಯ ಹೆಸರನ್ನೂ ರಾಜ್ಯ ಸರ್ಕಾರವು ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಿದೆ. ಈ ಸಂಬಂಧ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಧಾರ್ಮಿಕ ಪರಿಷತ್ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ‘ಸಲಾಂ ಆರತಿ’ ಬದಲಿಗೆ, ‘ಆರತಿ ನಮಸ್ಕಾರ’ ಹಾಗೂ ‘ಸಲಾಂ ಮಂಗಳಾರತಿ’ ಬದಲು ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಿಸಲಾಗಿದೆ. ಆದರೆ ದೇಗುಲಗಳಲ್ಲಿ ಸೇವೆಯು ಯಥಾವತ್ತು ಮುಂದುವರಿಯಲಿವೆ. ‘ಸಲಾಂ ಪದವು ಸಂಸ್ಕೃತ ಭಾಷೆಯದ್ದಲ್ಲ. ಹೀಗಾಗಿ ಉಳಿದೆಲ್ಲ ಸೇವೆಗಳಿಗೆ ಇರುವಂತೆ ಮಂಗಳಾರತಿಗೂ ಸಂಸ್ಕೃತದ ಪದವನ್ನೇ ಬಳಸಬೇಕು’ ಎಂಬ ಅಭಿಪ್ರಾಯವನ್ನು ಧಾರ್ಮಿಕ ಪರಿಷತ್ ಸದಸ್ಯರು ವ್ಯಕ್ತಪಡಿಸಿದ್ದರು.

‘ಮುಜರಾಯಿ’ ಪದವನ್ನೂ ಕೈಬಿಡಬೇಕೆಂಬ ಒತ್ತಾಯ ಕೇಳಿಬಂದಿದೆ. ‘ಈ ಮೊದಲು ಮುಜರಾಯಿ ಹೆಸರಿನ ಬಳಕೆ ನಿಲ್ಲಿಸಲಾಗಿತ್ತು. ಅದನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿ ಇಲಾಖೆ ಎಂದು ಕರೆಯಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಬೇಕು’ ಎಂದು ಪರಿಷತ್ ಸದಸ್ಯರು ಹೇಳಿದ್ದಾರೆ.

‘ಟಿಪ್ಪು ಸುಲ್ತಾನ್ ಆಳ್ವಿಕೆಯಿದ್ದ ಸಂದರ್ಭದಲ್ಲಿ ದೀವಟಿಗೆ ಸಲಾಂ ಪದ ರೂಢಿಗೆ ಬಂದಿತ್ತು. ರಾಜ್ಯವನ್ನು ಆಳುವವರು ಮತ್ತು ಜನರಿಗೆ ಒಳಿತಾಗಲಿ ಎಂಬ ಆಶಯದೊಂದಿಗೆ ಈ ಪದ್ಧತಿಯನ್ನು ಮುಂದುವರಿಸಲಾಗುವುದು. ಟಿಪ್ಪು ಸುಲ್ತಾನ್ ದೇಗುಲಕ್ಕೆ ರಾತ್ರಿ ಪ್ರದೋಷ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡಿ, ಸಲಾಮ್ ಮಾಡಿದ್ದ. ಹೀಗಾಗಿ ಇದಕ್ಕೆ ವಾಡಿಕೆಯಲ್ಲಿ ಸಲಾಂ ಮಂಗಳಾರತಿ ಎಂಬ ಆಡುಮಾತಿನ ರೂಢಿ ಬಂತು. ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಪ್ರದೋಷ ಮಂಗಳಾರತಿಯ ಪದ್ಧತಿ ಪರಂಪರೆಯಲ್ಲಿದೆ. ಹೀಗಾಗಿ ಅದನ್ನೇ ಮುಂದುವರಿಸುವುದು ಒಳಿತು’ ಎಂದು ಆಗಮಿಕರಾದ ಶ್ರೀಧರ ಅಡಿಗ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!

ದಕ್ಷಿಣ ಕನ್ನಡ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Sat, 10 December 22