ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಕಟ್ಟಿ ಬೆದರಿಕೆ: ಸಿಐಡಿಗೆ ತನಿಖೆ ಹೊಣೆ ವಹಿಸಿ ಆದೇಶ

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಕಟ್ಟಿ ಬೆದರಿಕೆ: ಸಿಐಡಿಗೆ ತನಿಖೆ ಹೊಣೆ ವಹಿಸಿ ಆದೇಶ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (ಸಂಗ್ರಹ ಚಿತ್ರ)
Edited By:

Updated on: Oct 18, 2022 | 11:55 AM

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರ್ ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಜಿಲ್ಲೆಯ ಫರಂಗಿಪೇಟೆ ಬಳಿ ಕಾರು ಅಡ್ಡಗಟ್ಟಿ ಶಾಸಕರಿಗೆ ಬೆದರಿಕೆ ಹಾಕಿದ್ದ ಬಗ್ಗೆ ಶಾಸಕರ ಕಾರು ಚಾಲಕ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಆರೋಪಿ ರಿಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಇದು ಕೊಲೆ ಯತ್ನ ಪ್ರಕರಣವಲ್ಲ. ಕಾರು ಹಿಂದಿಕ್ಕುವಾಗ ಈ ಘಟನೆ ನಡೆದಿದೆ ಎಂದು ಎಸ್​ಪಿ ಸ್ಪಷ್ಟನೆ ನೀಡಿದ್ದರು. ಇದೀಗ ರಾಜ್ಯ ಸರ್ಕಾರವು ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ತನಿಖಾಧಿಕಾರಿ ಕಚೇರಿಯಲ್ಲಿರುವ ದಾಖಲೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಸಿಐಡಿ ಕಚೇರಿಗೆ ಹಸ್ತಾಂತರಿಸಬೇಕು ಎಂದು ಡಿಜಿಪಿ ಪರವಾಗಿ ಆದೇಶ ಹೊರಡಿಸಿರುವ ಆರ್.ಹಿತೇಂದ್ರ ಆದೇಶದಲ್ಲಿ ಹೇಳಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಕಳೆದ ಅ 13ರ ರಾತ್ರಿ ವಿಮಾನದಲ್ಲಿ ಬಂದಿದ್ದ ಶಾಸಕರು ರಾತ್ರಿ 11.15 ಸಮಯದಲ್ಲಿ ಮನೆಗೆ ತೆರಳುವ ವೇಳೆ ಆರೋಪಿಗಳು ಫರಂಗಿಪೇಟೆ ಬಳಿ ಕಾರು ಅಡ್ಡಗಟ್ಟಿದ್ದರು. ಮಾರಕಾಸ್ತ್ರ ಝಳಪಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ನಂತರ ಬಿಳಿ ಬಣ್ಣದ ಸ್ಕಾರ್ಪಿಯೊ ಕಾರ್ ಒಂದು ಮಂಗಳೂರಿನಿಂದ ಫರಂಗಿಪೇಟೆವರೆಗೆ ಶಾಸಕರ ಕಾರನ್ನು ಹಿಂಬಾಲಿಸಿಕೊಂಡು ಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.