ಕೇರಳದ ಮಲಪ್ಪುರದಲ್ಲಿ ಮಂಕಿಪಾಕ್ಸ್ ಪತ್ತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ, ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್

ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಮಂಕಿ ಪಾಕ್ಸ್ ಪತ್ತೆ ಹಾಗೂ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೋಗ ಲಕ್ಷಣಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ವಿವರ ಇಲ್ಲಿದೆ.

ಕೇರಳದ ಮಲಪ್ಪುರದಲ್ಲಿ ಮಂಕಿಪಾಕ್ಸ್ ಪತ್ತೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ, ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Sep 21, 2024 | 12:55 PM

ಮಂಗಳೂರು, ಸೆಪ್ಟೆಂಬರ್ 21: ಕರ್ನಾಟಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯು ಪ್ರಯಾಣಿಕರ ತಪಾಸಣೆಯನ್ನು ತೀವ್ರಗೊಳಿಸಿದೆ.

ಶಂಕಿತ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಕ್ರೀನಿಂಗ್ ವೇಳೆ ಯಾವುದೇ ಪ್ರಯಾಣಿಕರಲ್ಲಿ ಪಾಸಿಟಿವ್ ಕಂಡುಬಂದರೆ, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನಾಗರಿಕರು ಜಾಗರೂಕರಾಗಿರಬೇಕು ಮತ್ತು ರೋಗಲಕ್ಷಣಗಳ ಅನುಮಾನ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಸಾಂಕ್ರಾಮಿಕ ರೋಗಗಳ ಸರ್ವೆಲೆನ್ಸ್ ಅಧಿಕಾರಿ ಡಾ. ನವೀನ್ ಕುಲಾಲ್ ಮಾಹಿತಿ ನೀಡಿದ್ದಾರೆ.

ಅಧಿಕಾರಿ ಡಾ. ನವೀನ್ ಕುಲಾಲ್ ಹೇಳಿದ್ದೇನು?

  • ಮಂಕಿಪಾಕ್ಸ್ ಒಂದು ವೈರಸ್ ಸೋಂಕಾಗಿದ್ದು ಅದು ಪ್ರಾಣಿಗಳ ಮೂಲಕ ಹರಡುತ್ತದೆ ಮತ್ತು ಸಿಡುಬು ರೋಗಲಕ್ಷಣಗಳನ್ನು ಹೋಲುತ್ತದೆ.
  • ದೊಡ್ಡ ದೊಡ್ಡ ಗಾತ್ರದ ಗುಳ್ಳೆಗಳು ಮೈಮೇಲೆ ಬಂದು ಗುಳ್ಳೆಯಲ್ಲಿ ನೀರು ತುಂಬುತ್ತದೆ.
  • ರೋಗ ಬಂದು ಸುಮಾರು 21 ದಿನದವರೆಗೆ ರೋಗ ಲಕ್ಷಣ ಕಂಡು ಬರಬಹುದು
  • ರೋಗ ಬಂದು ಗುಣ ಆಗುವವರೆಗೂ ಆ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆ ಇದೆ.
  • 90 ಶೇಕಡಾ ಜನ ಇದರಿಂದ ಗುಣಮುಖ ಆಗುತ್ತಾರೆ. ಶೇ 10ರಷ್ಟು ಜನ ಸಾವನಪ್ಪುವ ಸಾಧ್ಯತೆ ಇರುತ್ತದೆ.

ದಕ್ಷಿಣ ಕನ್ನಡದಲ್ಲಿ ಮುನ್ನೆಚ್ಚರಿಕೆ ಕ್ರಮಗಳು

  • ಮಂಗಳೂರಿನಲ್ಲಿ ಎರಡು ಪ್ರವೇಶ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅವುಗಳು ಬಂದರು ಮತ್ತು ವಿಮಾನ ನಿಲ್ದಾಣ.
  • ಈ ಎರಡೂ ಕಡೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.
  • ಸೋಂಕು ಪೀಡಿತ ದೇಶದಿಂದ ಪ್ರಯಾಣಿಸಿದ ಇಬ್ಬರು ವ್ಯಕ್ತಿಗಳನ್ನು ಗುರುತಿಸಲಾಗಿದೆ, ಆದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್, ಓರ್ವರಲ್ಲಿ ನಿಫಾ ಗುಣಲಕ್ಷಣ ಪತ್ತೆ

ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ವರದಿಯಾಗಿದೆ. ಇದು ಬಾವಲಿಗಳ ಮೂಲಕ ಹರಡುತ್ತದೆ. ನಿಫಾ ವೈರಸ್‌ನಿಂದ ಸಾವಿನ ಅಪಾಯವು ಮಂಗನ ಕಾಯಿಲೆಗಿಂತ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಎರಡೂ ಸೋಂಕುಗಳು ಹರಡದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ನಾಗರಿಕರು ಜಾಗರೂಕರಾಗಿರಬೇಕು ಎಂದು ಡಾ.ಕುಲಾಲ್ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:52 pm, Sat, 21 September 24

Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us