ಮಂಗಳೂರು: ಕರಾವಳಿಯ ಆರಾಧ್ಯ ಗುಳಿಗ ದೈವದ (Guliga Daiva) ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿದ್ದು, ದೈವ ನರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಗೃಹ ಸಚಿವರು ಫ್ಲೆಕ್ಸ್ ನೋಡಿ ಗುಳಿಗೆ-ಗುಳಿಗೆ ಎಂದು ಹೇಳಿದ್ದಾರೆ. ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಸಿದ್ದಾರೆ. ನಮ್ಮ ದೈವವೇ ಅವರಿಗೆ ಉತ್ತರ ಕೊಡಬೇಕು. ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು. ದೈವ-ದೇವರ ಸನ್ನಿಧಿಯಲ್ಲಿ ಬಂದು ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದ್ದಾರೆ.
ಒಂದು ವಾರದ ಗಡುವು ನೀಡುತ್ತೇವೆ. ಒಂದು ವಾರದಲ್ಲಿ ಬರದೆ ಇದ್ದರೆ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಘೇರಾವ್ ಹಾಕುತ್ತೇವೆ. ಇನ್ಮುಂದೆ ದೈವಾರಾಧನೆಯನ್ನು ನಾಟಕ, ಯಕ್ಷಗಾನದಲ್ಲಿ ಬಳಕೆ ಮಾಡಬೇಡಿ. ದೈವರಾಧನೆಗೆ ಈ ರೀತಿ ನಡೆಯುವ ಅಪಚಾರ ತಪ್ಪಿಸಲು ದೈವರಾಧಕರ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಆರಗ ಜ್ಞಾನೇಂದ್ರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ಟೀಕಿಸುವ ಭರದಲ್ಲಿ ಕರಗಕ್ಕೆ ಶಾಸಕ ಹ್ಯಾರಿಸ್ ಅವಹೇಳನ: ಭಾರಿ ಪ್ರತಿಭಟನೆ ಸುಳಿವು ಸಿಗುತ್ತಿದ್ದಂತೆ ಕ್ಷಮೆಯಾಚನೆ
ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಮಾರ್ಚ್ 14 ರಂದು ತೀರ್ಥಹಳ್ಳಿಯಲ್ಲಿ ಪ್ರಸಿದ್ದ ಶಿವದೂತೆ ಗುಳಿಗೆ ನಾಟಕ ನಡೆದಿತ್ತು. ಈ ನಾಟಕದ ಬಗ್ಗೆ ಮರುದಿನ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಅರಗ ಜ್ಞಾನೇಂದ್ರ ಕಾಂಗ್ರೆಸ್ ಟೀಕಿಸುವ ಭರದಲ್ಲಿ ನಿನ್ನೆಯಿಂದ ಎಂತದೋ ಗುಳಿಗೆ – ಗುಳಿಗೆ ಅಂತ ಹಾಕಿದ್ದಾರೆ. ಬಹಳ ಅಪಾಯ ಇದು. ಯಾವ ಗುಳಿಗೆ ಇವರು ಕೊಡುತ್ತಾರೆ ಅಂತ ಗೊತ್ತಿಲ್ಲ. ಜಾಪಾಳ್ ಗುಳಿಗೆ ಕೊಟ್ಟರು ಕೊಡಬಹುದು ಎಂದು ಹೇಳುವ ಮೂಲಕ, ದೈವಕ್ಕೆ ಅವಹೇಳನ ಮಾಡಿದ್ದಾರೆ, ಎಂಬ ಆರೋಪ ವ್ಯಕ್ತವಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Sat, 18 March 23