
ಮಂಗಳೂರು/ಬೆಂಗಳೂರು, ನವೆಂಬರ್ 28: ಕರ್ನಾಟಕದಲ್ಲಿ ಮೆಕ್ಕೆಜೋಳ, ಹೆಸರು ಕಾಳು ಮತ್ತು ಬೇಳೆಗಳ ದರ ನಿಗದಿಗೆ ಆಗ್ರಹಿಸಿ ಕರ್ನಾಟಕದಿಂದ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನಲೆ ಮಂಗಳೂರು ಏರ್ಪೋರ್ಟ್ಗೆ ಆಗಮಿಸಿದ್ದ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 2,400 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 8,768 ರೂ. ರಂತೆ ಎಂಎಸ್ಪಿ ಘೋಷಿಸಿದೆ. ಆದರೆ ಕರ್ನಾಟಕದಲ್ಲಿ ಪ್ರಸ್ತುತವಾಗಿ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 1600-1800 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 5,400 ರೂ. ಬೆಲೆ ಇದೆ. ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು 32 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಲಭ್ಯವಿದ್ದು, ಈ ವಿಚಾರದಲ್ಲಿ ಭಾರತ ಸರ್ಕಾರದ ತಕ್ಷಣವೇ ಮಧ್ಯಪ್ರವೇಶ ಮಾಡಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ
ಮೆಕ್ಕೆ ಜೋಳ ಖರೀದಿ ಕೇಂದ್ರ ಒಪನ್ ಮಾಡದ ಸರ್ಕಾರದ ವಿರುದ್ಧ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಮಹಾತ್ಮಾ ಗಾಂಧಿ ವೃತ್ತದ ಬಳಿ ಎಮ್ಮೆಗೆ ಸಿಎಂ ಫೋಟೋ ಕಟ್ಟಿ , ಕೃಷಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಮುಳುಗಿರುವ ಸರ್ಕಾರದಿಂದ ರೈತರ ಕಡೆಗಣನೆ ಮಾಡಲಾಗುತ್ತಿದೆ. ಭರವಸೆ ನೀಡಿದಂತೆ ಖರೀದಿ ಕೇಂದ್ರ ಒಪನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Fri, 28 November 25