ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ದೇವಸ್ಥಾನಗಳಾದ ಕಟೀಲು ದುರ್ಗಾ ಪರಮೇಶ್ವರಿ ಮತ್ತು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಗಳಲ್ಲಿ ಒಂದು ಬೋರ್ಡ್ ಅಳವಡಿಸಲಾಗಿದೆ. ‘ಹಿಂದೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ವಿನಂತಿ’ ಎಂಬುದೇ ಆ ಬೋರ್ಡ್. ಈ ಬೋರ್ಡ್ ಬಗ್ಗೆ ಈಗ ಚರ್ಚೆಗಳು ಆರಂಭವಾಗಿದೆ. ಹಿಂದೂ ಸಾಂಪ್ರದಾಯಿಕ ಉಡುಗೆಯನ್ನು ತೊಡದೆ ಬಂದಲ್ಲಿ ದೇವರ ದರ್ಶನಕ್ಕೆ ಪ್ರವೇಶ ನೀಡುವುದಿಲ್ಲವೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ. ಈ ವಿಚಾರದ ಕುರಿತು ಕೆಲವರಿಂದ ವಿರೋಧವು ಕೇಳಿಬಂದಿದೆ. ಇನ್ನೂ ಕೆಲವರು ಇದು ಸರಿಯಾದ ನಿಲುವು ಎಂದು ಸಹ ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ಈ ಬಗ್ಗೆ ಕಾನೂನೇನು ಜಾರಿಯಾಗಿಲ್ಲ. ಹೇಗೆ ಅನುಷ್ಟಾನಕ್ಕೆ ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕರು, ಭಕ್ತರು ಈ ಬೋರ್ಡ್ ಬಗ್ಗೆ ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಈ ಎಲ್ಲಾ ಗೊಂದಕ್ಕೆ ಟಿವಿ9 ಡಿಜಿಟಲ್ ಉತ್ತರ ನೀಡುತ್ತಿದೆ.
ಈ ಬೋರ್ಡ್ ನೋಡಿದ ಭಕ್ತರಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವರ ದರ್ಶನಕ್ಕೆ ಅವಕಾಶ ಸಿಗುತ್ತಾ ಇಲ್ವಾ ಅನ್ನೊ ಗೊಂದಲವಿತ್ತು. ಇನ್ನು ಇದು ಕಾನೂನಾ, ನಿಯಮವೇ, ಇಲ್ಲವೇ ಸರ್ಕಾರ ಅಥವಾ ರಾಜ್ಯ ಧಾರ್ಮಿಕ ಪರಿಷತ್ ಹೊರಡಿಸಿರುವ ಆದೇಶವೇ ಎಂಬ ಬಗ್ಗೆ ಗೊಂದಲವಿತ್ತು. ಈ ಬೋರ್ಡ್ನಲ್ಲಿ ಸ್ಪಷ್ಟವಾಗಿ ಬರೆದಿರೋದನ್ನು ಗಮನಿಸಬೇಕು. ಅಲ್ಲಿ ಮನವಿ ಅಂತಾ ಇದೆ. ಅಂದ್ರೆ ಈ ಬೋರ್ಡ್ನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಮಾಡಿರುವ ಮನವಿಯಾಗಿದೆ. ಅಂದ್ರೆ ಹಿಂದೂ ಸಾಂಪ್ರದಾಯಿಕ ಉಡುಗೆಯಲ್ಲಿ ಬನ್ನಿ ಎಂದು ಮನವಿ ಮಾಡಿದ್ದಾರೆ. ಇದು ಆದೇಶವಲ್ಲ. ಸರ್ಕಾರ ಅಥವಾ ಧಾರ್ಮಿಕ ಪರಿಷತ್ ಈ ಬಗ್ಗೆ ಆದೇಶ ಮಾಡಿಲ್ಲ. ಆದರೆ ಇಂತದ್ದೊಂದು ನಿಯಮವನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಜಾರಿಗೊಳಿಸಿದೆ. ಮನವಿಯ ಮೇರೆಗೆ ಈ ನಿಯಮವನ್ನು ಜಾರಿಗೊಳಿಸಿದ್ದು, ಇದು ತುಂಡುಡುಗೆ ಹಾಕಿ ಬರುವ ಭಕ್ತರಿಗೆ ಅರಿವು ಮೂಡಿಸಲು ಈ ಪ್ರಯತ್ನವಾಗಿದೆ ಎಂದು ಟಿವಿ9 ಡಿಜಿಟಲ್ ಗೆ ಕಟೀಲು ದುರ್ಗಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿ ಅಸ್ರಣ್ಣ ಮಾಹಿತಿ ನೀಡಿದ್ದಾರೆ.
ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಇದು ಅನ್ವಯ
ಇನ್ನು ಸದ್ಯ ರಾಜ್ಯ ಧಾರ್ಮಿಕ ಪರಿಷತ್ನಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳಿಗೂ ಅನ್ವಯ ಮಾಡುವ ನಿರ್ಧಾರ ಮಾಡಲಾಗಿದೆ. ಎಲ್ಲಾ ದೇವಸ್ಥಾನಗಳಿಗೂ, ಸಾಂಪ್ರದಾಯಿಕ ಉಡುಗೆಯುನ್ನುಟ್ಟು ಪ್ರವೇಶಿಸುವ ಬಗ್ಗೆ ನಿಯಮ ಮಾಡಿಕೊಳ್ಳಲು ಸೂಚಿಸಲಾಗುತ್ತಿದೆ. ಇದರ ಪ್ರಕ್ರಿಯೆ ನಡೆಯುತ್ತಿದ್ದು ದೇವಸ್ಥಾನಗಳಿಗೆ ಸೂಚನೆ ನೀಡಲಾಗುತ್ತಿದೆ. ಜೊತೆಗೆ ರಾಜ್ಯದ ಎಲ್ಲಾ ಎ ದರ್ಜೆ ದೇವಸ್ಥಾನಗಳಿಗೆ ಇದೇ ರೀತಿ ಸೂಚನೆಯನ್ನು ಮೊದಲ ಹಂತದಲ್ಲಿ ನೀಡುವ ನಿರ್ಧಾರವನ್ನು ಮಾಡಲಾಗಿದೆ. ಆದರೆ ನಿಗದಿತವಾಗಿ ಇಂತಹದ್ದೇ ಬಟ್ಟೆಯನ್ನು ಹಾಕಿಕೊಂಡು ಬರಬೇಕು ಅಂತಾ ಧಾರ್ಮಿಕ ಪರಿಷತ್ ನಿಯಮವನ್ನು ಮಾಡಲ್ಲ. ಯಾವ ರೀತಿಯ ಬಟ್ಟೆಯನ್ನು ಹಾಕಿ ಬರಬೇಕು ಎಂಬ ನಿಯಮವನ್ನು ಆಯಾ ದೇವಸ್ಥಾನದ ಆಡಳಿತ ಮಂಡಳಿ ಮಾಡಬೇಕು. ಅದನ್ನು ಪಾಲಿಸಲು ಕೂಡ ಆಯಾ ದೇವಸ್ಥಾನವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಧಾರ್ಮಿಕ ಪರಿಷತ್ ಸ್ಪಷ್ಟ ಸೂಚನೆ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರವೇಶಿಸಬೇಕು ಎಂಬುದಷ್ಟೇ ಇರುತ್ತದೆ. ಸಾಂಪ್ರದಾಯಿಕ ಉಡುಗೆ ಯಾವುದು ಎಂಬುದನ್ನು ಸ್ಥಳೀಯವಾಗಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ನಿಗದಿಪಡಿಸುವುದು ಆಯಾ ದೇವಸ್ಥಾನದ ಆಡಳಿತ ಮಂಡಳಿ ಬಿಟ್ಟಿದ್ದು ಎಂದು ಟಿವಿ9 ಡಿಜಿಟಲ್ ಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.
ಮೈಕಾಣುವ ಬಟ್ಟೆಯಲ್ಲಿ ಬಂದ್ರೆ ಇತರ ಭಕ್ತರ ಭಕ್ತಿಗೆ ತೊಂದರೆ
ಇತ್ತೀಚೆಗೆ ದೇವಸ್ಥಾನಕ್ಕೆ ಮೈ ಕಾಣುವಂತ ಬಟ್ಟೆಯನ್ನು ಉಟ್ಟು ಬರುತ್ತಿದ್ದರು. ಆದ್ದರಿಂದ ಇಂತಹ ನಿಯಮವನ್ನು ಆಡಳಿತ ಮಂಡಳಿಯವರೇ ಮಾಡಿ ಬೋರ್ಡ್ ಹಾಕಿದ್ದೇವೆ. ಇದು ಈಗ ಮನವಿಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರವೇಶ ಮಾಡೋದನ್ನು ಕಡ್ಡಾಯಗೊಳಿಸುತ್ತೇವೆ ಅಂತಾ ಟಿವಿ9 ಡಿಜಿಟಲ್ ಗೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರಿ ಅಸ್ರಣ್ಣ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಹರಿ ಅಸ್ರಣ್ಣ, ಮೈ ಕಾಣುವಂತಹ ಬಟ್ಟೆಯನ್ನು ಉಟ್ಟು ಬರುತ್ತಿದ್ದರು. ಅದರಿಂದ ಇತರ ಭಕ್ತರಿಗೂ ಕಿರಿಕಿರಿ ಆಗುತ್ತಿತ್ತು. ಭಕ್ತಿಗೂ ಕೂಡ ತೊಂದರೆಯಾಗುತ್ತಿತ್ತು. ಆದ್ದರಿಂದ ಇಂತಹ ನಿಯಮವನ್ನು ನಾವೇ ರಚಿಸಿದ್ದೇವೆ. ನಮಗೆ ಈವರೆಗೂ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ.
ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ
ಟಿವಿ9 ಮಂಗಳೂರು
ಇದನ್ನೂ ಓದಿ: