ಮಂಗಳೂರು, ಮಾ.16: ಅರುಣ್ ಕುಮಾರ್ ಪುತ್ತಿಲ (Arun Kumar Puttila) ಬಿಜೆಪಿ ಸೇರ್ಪಡೆಗೆ ಪುತ್ತೂರಿನ ಸ್ಥಳೀಯ ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನಿನ್ನೆ ಪುತ್ತೂರು (Puttur) ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ (Satish Kumpala) ಅವರಿಗೆ ಅವಾಚ್ಯ ಬೈಗುಳ ನೀಡಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಟೀಂನಿಂದ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದೆ ಎನ್ನುವ ಸ್ಫೋಟಕ ವಿಚಾರ ಬಯಲಿಗೆ ಬಂದಿದೆ. ಈ ಬಗ್ಗೆ ಇನ್ಸೈಡ್ ಸ್ಟೋರಿ ಇಲ್ಲಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಪುತ್ತಿಲ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವ ವಿಚಾರವಾಗಿ ಸತೀಶ್ ಕುಂಪಲ ಮತ್ತಿತರ ಬಿಜೆಪಿ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಪುತ್ತಿಲ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ, ನಿನ್ನೆ ಬಿಜೆಪಿ ಕಚೇರಿಯಲ್ಲಿ ಪುತ್ತಿಲ ಅವರ ಪಕ್ಷ ಸೇರ್ಪಡೆಯಾಗಬೇಕಿತ್ತು. ಆದರೆ, ನಡೆದಿದ್ದೇ ಬೇರೆ.
ಜಿಲ್ಲೆಗೆ ಆಗಮಿಸಿದ ಸತೀಶ್ ಕುಂಪಲ ಅವರು ನೇರವಾಗಿ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು ಭಾರೀ ಕುತೂಹಲ ಮೂಡಿಸಿತ್ತು. ಇತ್ತ, ಕುಂಪಲ ಮಾತುಕತೆಯಂತೆ ಪುತ್ತಿಲ ಮತ್ತು 300 ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಲು ಸಜ್ಜಾಗಿ ನಿಂತಿದ್ದರು. ಆದರೆ, ಬಿಜೆಪಿ ಕಚೇರಿಗೆ ಕುಂಪಲ ಪ್ರವೇಶ ಮಾಡುತ್ತಿದ್ದಂತೆ ಮಾಧ್ಯಮದವರು ಒಳ ಪ್ರವೇಶ ಮಾಡದಂತೆ ಕಚೇರಿಗೆ ಬಾಗಿಲು ಲಾಕ್ ಮಾಡಲಾಗಿದೆ.
ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಜತೆಗಿನ ಸಂಧಾನ ಯಶಸ್ವಿ, ಹಿಂದೂ ಮುಖಂಡ ಬಿಜೆಪಿ ಸೇರ್ಪಡೆ
ಹೀಗೆ ಜಿಲ್ಲಾಧ್ಯಕ್ಷರನ್ನು ಕೂಡಿ ಹಾಕಿದ ಸ್ಥಳೀಯ ನಾಯಕರು ಮತ್ತು ಯಾವುದೇ ಸ್ಥಾನದಲ್ಲಿ ಇಲ್ಲದ ಬೆಂಬಲಿಗರು ಹೈಡ್ರಾಮವೇ ನಡೆಸಿದ್ದಾರೆ. ಸತೀಶ್ ಕುಂಪುಲ, ರಾಧಕೃಷ್ಣ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ, ಸುಲೋಚನ ಭಟ್, ಪ್ರೇಮಾನಂದ್ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರ್ ಇನ್ನಿತರರು ಸಭೆಯಲ್ಲಿ ಭಾಗಿಯಾಗಿದ್ದರು.
ಆದರೆ, ಪುತ್ತಿಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬಾರದೆಂದು ಪಟ್ಟು ಹಿಡಿದಿರುವ ಕಟೀಲ್ ಟೀಂ, ಮಠಂದೂರ್ ಟೀಂ, ಕಿಶೋರ್ ಬೊಟ್ಯಾಡಿ ಟೀಂ ಜಿಲ್ಲಾಧ್ಯಕ್ಷರಿಗೇ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪುತ್ತಿಲ ಹೊರತುಪಡಿಸಿ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕಿಶೋರ್ ಬೊಟ್ಯಾಡಿ ಈ ಸಭೆಯಲ್ಲಿ ಭಾಗಿಯಾಗದಿದ್ದರೂ ಇವರ ತಂಡ ಸಭೆಯಲ್ಲಿ ಭಾಗಿಯಾಗಿತ್ತು.
ಈ ಎಲ್ಲಾ ತಂಡಗಳು ಕಚೇರಿಯಲ್ಲಿ ಗದ್ದಲ ನಡೆಸಿವೆ. ಅಲ್ಲದೆ, ಅಶೋಕ್ ಶೆಣೈ ಎಂಬವರು ಜಿಲ್ಲಾಧ್ಯಕ್ಷರಿಗೆ ಕುರ್ಚಿ ಎಸೆದಿದ್ದು, ಕಟೀಲ್ ತಂಡದಲ್ಲಿ ಗುರುತಿಸಿಕೊಂಡಿರುವ ಅಜಿತ್ ಹೊಸಮಣೆ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಭೆ ಬಳಿಕ ಆ ತಂಡ ಕಟೀಲ್ ನಿವಾಸದ ಕಡೆ ತೆರಳಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ನಗರ ಅಧ್ಯಕ್ಷ ಜಗನ್ನಿವಾಸ ರಾವ್ ಪರೋಕ್ಷ ಬೆಂಬಲ ಸೂಚಿಸಿದ್ದರು. ಇದು ಸ್ಥಳೀಯ ಬಿಜೆಪಿ ಮುಖಂಡರ ಕೋಪಕ್ಕೂ ಕಾರಣವಾಗಿತ್ತು. ನಿನ್ನೆ ನಡೆದ ಸಭೆಯಗೆ ಜಗನ್ನಿವಾಸ ರಾವ್ ಆಗಮಿಸಿದರೆ ಮೈಗೆ ಕೈಹಾಕುವ (ಹಲ್ಲೆ) ಪ್ಲಾನ್ ನಡೆದಿತ್ತು ಎಂಬ ವಿಚಾರವೂ ಮೂಲಗಳಿಂದ ತಿಳಿದುಬಂದಿದೆ.
ಸತತ ಮೂರು ಗಂಟೆಗಳ ಕಾಲ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಕುಂಪಲ ಅವರನ್ನು ಕಚೇರಿಯಿಂದ ಹೊರ ಹೋಗಲು ಬಿಟ್ಟಿಲ್ಲ. ಕಚೇರಿಯಿಂದ ಹೊರ ಹೋಗಬೇಕಾದರೆ ತಾವು ಹೇಳಿದಂತೆ ಹೇಳಿಕೆ ನೀಡಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ, ಕುಂಪಲ ಅವರು ಮಾಧ್ಯಮದ ಮುಂದೆ ಬಂದು, ಪುತ್ತಿಲ ಪಕ್ಷ ಸೇರ್ಪಡೆ ಮಾಧ್ಯಮ ವರದಿಷ್ಟೇ ಎಂದು ಹೇಳಿ ಉಲ್ಟಾ ಹೊಡೆದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒಪ್ಪಿದರೂ ಪುತ್ತಿಲ ಪಕ್ಷ ಪ್ರವೇಶಕ್ಕೆ ಸ್ಥಳೀಯ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಪುತ್ತೂರು ಬಿಜೆಪಿ ಮಂಡಲಕ್ಕೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಜಿಲ್ಲಾಧ್ಯಕ್ಷರಿಗೆ ಒತ್ತಡ ಹೇರಲಾಗಿದೆ. ಅಲ್ಲದೆ, ಪುತ್ತಿಲ ಮತ್ತು ಬಿಜೆಪಿ ನಡುವಿನ ಗಲಾಟೆ ಸಂದರ್ಭದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆದ ಬಳಿಕವೇ ಪುತ್ತಿಲರನ್ನು ಪಕ್ಷಕ್ಕೆ ಸೇರಿಸುವಂತೆ ಪಟ್ಟು ಹಿಡಿಯಲಾಗಿದೆ.
ಪುತ್ತೂರಿನ ಕೆಲ ಬಿಜೆಪಿ ನಾಯಕರ ಅಪಸ್ವರದಿಂದ ಪುತ್ತಿಲ ಪಕ್ಷ ಸೇರ್ಪಡೆ ಮತ್ತೆ ಗೊಂದಲವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಪುತ್ತಿಲ ಪರಿವಾರ ಅಸಮಾಧಾನ ಹೊರಹಾಕಿದೆ. ಈ ಬಗ್ಗೆ ಪೋಸ್ಟ್ ಮಾಡಿದ ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ, ಬಿಜೆಪಿ ಹೈಕಮಾಂಡ್ ಸರಿಯಾಗಿಯೇ ಇದೆ, ಒಂದಾಗಲು ಮನಸ್ಸಿಲ್ಲದ್ದು ಲೋಕಲ್ ಬೆರಳೆಣಿಕೆಯ ಜನರಿಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
300 ಜನ ಕಾರ್ಯಕರ್ತರು ಪುತ್ತೂರು ಬಿ.ಜೆ.ಪಿ ಆಫೀಸ್ ಪ್ರವೇಶಿಸಲು ಕಾಯುತ್ತಿದ್ದೆವು. ನಮ್ಮ ಪುತ್ತಿಲ ಪರಿವಾರದ ಆಫೀಸಲ್ಲಿ ಮೀಟಿಂಗ್ ಕೂಡ ಆಗಿತ್ತು. ಹಳೆಯ ನೋವುಗಳನ್ನೆಲ್ಲ ಮರೆತು ದೇಶಕ್ಕಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂತ. ಆದರೆ ಪಕ್ಷದ ಆಫೀಸಲ್ಲಿ ಬಾಗಿಲು ಹಾಕಿ ನಾಲ್ಕೈದು ಜನ ಮಾಡಿದ ಗಲಾಟೆಯಿಂದಾಗಿ ಪುತ್ತಿಲರ ಸೇರ್ಪಡೆ ಕಾರ್ಯಕ್ರಮ ರದ್ದಾಯಿತು. ಪಕ್ಷ ಸೇರ್ಪಡೆಯ ವಿಚಾರದಲ್ಲಿ ನಮ್ಮ ಯಾವ ಕಾರ್ಯಕರ್ತರ ವಿರೋಧವೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sat, 16 March 24