ಮಂಗಳೂರು, ಫೆ.24: ವಿದ್ಯಾರ್ಥಿಯೊಬ್ಬ ಶಾಲಾ ಬಸ್ ಅಡಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ಹೊರವಲಯದ ಕುಳಾಯಿ ಬಳಿ ನಡೆದಿದೆ. ಫೆಬ್ರವರಿ 21 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ದೃಶ್ಯಾವಳಿಗಳು ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಇರುವಂತೆ, ಸುರತ್ಕಲ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯೊಬ್ಬ ಮನೆ ಸಮೀಪ ಶಾಲಾ ಬಸ್ನಿಂದ ಇಳಿದಿದ್ದಾನೆ. ಇಳಿದ ನಂತರ ಅದೇ ಬಸ್ನ ಮುಂಭಾಗದಿಂದ ಹೋಗಿ ರಸ್ತೆ ದಾಟಲು ಮುಂದಾದಾಗ ಇದನ್ನು ಗಮನಿಸದ ಚಾಲಕ ಬಸ್ ಚಾಲನೆ ಮಾಡಿದ್ದಾನೆ. ಇದರಿಂದಾಗಿ ವಿದ್ಯಾರ್ಥಿ ಬಸ್ನ ಮಧ್ಯಭಾಗದಿಂದ ಅಡಿಗೆ ಬಿದ್ದಿದ್ದಾನೆ.
ಇದನ್ನೂ ಓದಿ: ದುಬೈನಲ್ಲಿ ಮಂಗಳೂರಿನ ಯುವತಿ ಸಾವು: ಕಂಪನಿ ಕ್ಯಾಬ್ ಮಿಸ್ ಆಗಿದ್ದಕ್ಕೆ ಸ್ವಂತ ಕಾರಿನಲ್ಲಿ ಹೋಗುವಾಗ ಸಂಭವಿಸಿತು ದುರಂತ
ಇದನ್ನು ನೋಡಿದ ಇನ್ನೊಬ್ಬ ವಿದ್ಯಾರ್ಥಿ ಹಾಗೂ ಮಹಿಳೆ ಕಿರುಚಾಡಿದ್ದಾರೆ. ಇದರಿಂದ ಎಚ್ಚೆತ್ತ ಚಾಲಕ ಕೂಡಲೇ ಬಸ್ ನಿಲ್ಲಿಸಿ ಬಸ್ನಿಂದ ಕೆಳಗಿಳಿದು ಪರಿಶೀಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನೆಯಲ್ಲಿ ವಿದ್ಯಾರ್ಥಿಯು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಶಾಲಾ ಬಸ್ನಲ್ಲಿ ನಿರ್ವಾಹಕ ಇಲ್ಲದೆ ಈ ಘಟನೆ ನಡೆದಿದೆ.
ಶಾಲಾ ಬಸ್ ಅಡಿ ವಿದ್ಯಾರ್ಥಿ ಬಿದ್ದ ಪ್ರಕರಣ ಸಂಬಂಧ ಚಾಲಕ ಕಿರಣ್ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ IPC 279, 337 ಸೆಕ್ಷನ್ ಅಡಿ ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿಯವರು ನಡೆಸುವ ಸ್ಕೂಲ್ ಬಸ್ಗಳಿಗೆ ನಿರ್ವಾಹಕರನ್ನು ಇರಿಸುವಂತೆ ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಹರೀಶ್ಚಂದ್, ಪವಾಡಸದೃಶ್ಯವಾಗಿ ಹುಡುಗ ಪಾರಾಗಿದ್ದಾನೆ. ಮುಂದೆ ಈ ರೀತಿಯಾಗದಂತೆ ಪೋಷಕರು, ಚಾಲಕರು ಎಚ್ಚರಿಕೆ ವಹಿಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Sat, 24 February 24