ಮಂಗಳೂರು ವಿವಿ ವಸತಿ ನಿಲಯ ಕಾಮಗಾರಿ ಗೋಲ್​ಮಾಲ್: ಮಾಧ್ಯಮಗಳ ಪ್ರಶ್ನೆಗೆ ಸಚಿವ ಎಂಸಿ ಸುಧಾಕರ್ ಅಚ್ಚರಿ

| Updated By: Rakesh Nayak Manchi

Updated on: Dec 16, 2023 | 2:38 PM

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ‌‌.ಸಿ.ಸುಧಾಕರ್ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆದರೆ, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಚಿವರಿಗೆ ಮಾಹಿತಿಯೇ ತಿಳಿದಿಲ್ಲ. ಮಾಧ್ಯಮಗಳ ಪ್ರಶ್ನೆ ಮಾಡಿದಾಗ, ಈ ವಿಚಾರ ತನ್ನ ಗಮನಕ್ಕೇ ಬಂದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಮಂಗಳೂರು ವಿವಿ ವಸತಿ ನಿಲಯ ಕಾಮಗಾರಿ ಗೋಲ್​ಮಾಲ್: ಮಾಧ್ಯಮಗಳ ಪ್ರಶ್ನೆಗೆ ಸಚಿವ ಎಂಸಿ ಸುಧಾಕರ್ ಅಚ್ಚರಿ
ಮಂಗಳೂರು ವಿವಿ ವಸತಿ ನಿಲಯ ಕಾಮಗಾರಿ ಗೋಲ್​ಮಾಲ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅಚ್ಚರಿಗೊಂಡ ಸಚಿವ ಎಂಸಿ ಸುಧಾಕರ್
Follow us on

ಮಂಗಳೂರು, ಡಿ.16: ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangalore University) ನಡೆಯುತ್ತಿರುವ ಅವ್ಯವಹಾರಗಳ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (Dr.M.C.Sudhakar) ಅವರಿಗೇ ತಿಳಿದಿಲ್ಲ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಈ ವಿಚಾರ ತನ್ನ ಗಮನಕ್ಕೇ ಬಂದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಇಂದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ‌‌.ಸಿ.ಸುಧಾಕರ್, ವಿವಿಯ ಕಾವೇರಿ ಗೆಸ್ಟ್ ಹೌಸ್​ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ವಿವಿಯ ಪ್ರಭಾರಿ ವಿಸಿ ಜಯರಾಜ್ ಅಮೀನ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿವಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದ ಸಚಿವ ಸುಧಾಕರ್, ಮೊದಲ ಬಾರಿಗೆ ವಿವಿಗೆ ಆಗಮಿಸಿದ ಹಿನ್ನೆಲೆ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಕಾಮಗಾರಿ ಪ್ರಗತಿ, ಶೈಕ್ಷಣಿಕ ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕಿದರು.

ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು. ಈ ವೇಳೆ ಅಂತಾರಾಷ್ಟ್ರೀಯ ವಸತಿ ನಿಲಯ ಕಾಮಗಾರಿಯಲ್ಲಾದ ಗೋಲ್​ಮಾಲ್ ಆರೋಪದ ಬಗ್ಗೆ ಪ್ರಶ್ನಿಸಿದಾಗ ಸಚಿವರು ಅಚ್ಚರಿಗೊಂಡರು. ವಿದೇಶಿ ವಿದ್ಯಾರ್ಥಿಗಳಿಗಾಗಿ ವಿವಿಯಲ್ಲಿ ಅಂತಾರಾಷ್ಟ್ರೀಯ ವಸತಿ ನಿಲಯ ನಿರ್ಮಾಣವಾಗಿದೆ.

ಇದನ್ನೂ ಓದಿ: ಮಂಗಳೂರು: ಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಷನ್ ತಿರುಚಿದ ಕಿಡಿಗೇಡಿಗಳು

ಸುಮಾರು ಆರೇಳು ವರ್ಷವಾದರೂ ಹಾಸ್ಟೆಲ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಅರೆಬರೆ ಕಾಮಗಾರಿ ನಡೆಸಿ ಉದ್ಘಾಟಿಸಿದರೂ ವಸತಿ ನಿಲಯ ಪಾಳು ಬಿದ್ದಿದೆ. ಕಾಮಗಾರಿ ಪೂರ್ಣವಾಗದೇ ಇದ್ದರೂ ಬರೋಬ್ಬರಿ 36 ಕೋಟಿ ಹಣ ಟೆಂಡರ್ ಪಡೆದ ಕಂಪೆನಿಗೆ ಪಾವತಿ ಮಾಡಲಾಗಿದೆ. ಹೀಗಾಗಿ ಈ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅಚ್ಚರಿಗೊಂಡ ಸುಧಾಕರ್, ಈ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದೇ ಇಲ್ಲ ಎಂದು ಹೇಳಿ ಪಕ್ಕದಲ್ಲೇ ಇದ್ದ ವಿಸಿ ಜಯರಾಜ್ ಅಮೀನ್ ಬಳಿ ಮಾಹಿತಿ ಪಡೆದರು. ಈ ವೇಳೆ ಅನುದಾನ ಕೊರತೆ ಇದೆ, ಹಾಗಾಗಿ ಪೂರ್ಣವಾಗಿಲ್ಲ. ಸರ್ಕಾರ ಅನುದಾನ ಕೊಟ್ಟರೆ ಕಾಮಗಾರಿ ಮುಗಿಸುತ್ತೇವೆ ಎಂದ ಜಯರಾಜ್ ತಿಳಿಸಿದ್ದಾರೆ.

ಕಾಮಗಾರಿ ಮುಗಿಯದೇ ಇದ್ದರೂ ಉದ್ಘಾಟನೆ ಮಾಡಿ ಕೆಲಸ ನಿಲ್ಲಿಸಿದ ಬಗ್ಗೆ ಸುಧಾಕರ್ ಪ್ರಶ್ನಿಸಿದರಲ್ಲದೆ ಈ ಹಾಸ್ಟೆಲ್ ಕಾಮಗಾರಿ ಬಗ್ಗೆ ತನಿಖೆ‌ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಈವರೆಗೆ ಈ ವಿಚಾರ ನನ್ನ ಗಮನಕ್ಕೆ ಯಾರೂ ತಂದಿಲ್ಲ. ವಿವಿಯ ಯಾವುದೇ ಹಗರಣಗಳ ಬಗ್ಗೆ ಮಾಹಿತಿ ಇದ್ದರೆ‌ ಲಿಖಿತವಾಗಿ ನೀಡಿ. ದಾಖಲೆ ಒದಗಿಸಿದರೆ ಸೂಕ್ತ ತನಿಖೆ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದರು.

ಮಂಗಳೂರು ವಿವಿ ಪರೀಕ್ಷಾ ನಿರ್ವಾಹಣೆ, ಸೋಲಾರ್ ಹಗರಣ ಹಾಗೂ ಸಿಸಿಟಿವಿ ಹಗರಣ ಸೇರಿ ಅನೇಕ ಹಗರಣಗಳ ಆರೋಪ ಹೊತ್ತುಕೊಂಡಿದೆ. ಈಗಾಗಲೇ ನಿವೃತ್ತ ನ್ಯಾಯಮೂರ್ತಿ ರಾಧಾಕೃಷ್ಣ ಹೊಳ್ಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಿದ್ದರೂ ಆಡಳಿತ ಮಂಡಳಿ ವಿವಿಯ ಹಲವು ಅವ್ಯವಸ್ಥೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ