ಕರಾವಳಿ ಬಿಜೆಪಿಯಲ್ಲಿ ಬಂಡಾಯ ಸ್ಫೋಟ, ತೊಡೆತಟ್ಟಿದ ಉಡುಪಿ, ಮಂಗಳೂರು ನಾಯಕರು

| Updated By: ರಮೇಶ್ ಬಿ. ಜವಳಗೇರಾ

Updated on: May 14, 2024 | 8:40 PM

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ಕಾದುಕುಳಿತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೇ ಜೂನ್ 3ರಂದು ಒಟ್ಟು ಆರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿವೆ. ಆದ್ರೆ, ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಮಾಜಿ ಶಾಸಕ ರಘುಪತಿ ಭಟ್​ ಬೆನ್ನಲ್ಲೇ ಮತ್ತೋರ್ವ ಆರ್​ಎಸ್​ಎಸ್​ ಮುಖಂಡ ಬಿಜೆಪಿ ವಿರುದ್ಧ ತೊಡೆತಟ್ಟಿದ್ದಾರೆ.

ಕರಾವಳಿ ಬಿಜೆಪಿಯಲ್ಲಿ ಬಂಡಾಯ ಸ್ಫೋಟ, ತೊಡೆತಟ್ಟಿದ ಉಡುಪಿ, ಮಂಗಳೂರು ನಾಯಕರು
ಬಿಜೆಪಿ
Follow us on

ಮಂಗಳೂರು, (ಮೇ 14): ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕದಲ್ಲಿ ವಿಧಾನಪರಿಷತ್​​​ನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇದೇ ಜೂನ್ 3ರಂದು ಮತದಾನ ನಡೆಯಲಿದೆ. ಹೀಗಾಗಿ ಬಿಜೆಪಿ ಈಗಾಗಲೇ 4 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಇನ್ನುಳಿದ ಎರಡು ಕ್ಷೇತ್ರಗಳನ್ನು ಮಿತ್ರ ಪಕ್ಷ ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಆದ್ರೆ, ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ಇನ್ನು  ನೈರುತ್ಯ ಶಿಕ್ಷಕ ಕ್ಷೇತ್ರದ  ಟಿಕೆಟ್​ ಆಕಾಂಕ್ಷಿಯಾಗಿದ್ದ ಮಂಗಳೂರಿನ ಆರ್​ಎಸ್​ಎಸ್​ ಮುಖಂಡ ಎಸ್ ಆರ್ ಹರೀಶ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ನೈರುತ್ಯ ಶಿಕ್ಷಕ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ​ ಎಸ್ ಆರ್ ಹರೀಶ್ , ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ, ಎಬಿವಿಪಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇನ್ನು ಟಿಕೆಟ್​ ಕೈತಪ್ಪಿರುವ ಬಗ್ಗೆ ಟಿವಿ9 ಜೊತೆ ಮಾತನಾಡಿರು ಅವರು, ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡಬೇಕೆಂದು ಐದಾರು ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡಿದ್ದೇನೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹೊಂದಿರುವ ನೈರುತ್ಯ ಶಿಕ್ಷಕರ ಕ್ಷೇತ್ರ ವಿಶಾಲವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಗೆ ಕನಿಷ್ಠ ಒಂದು ಪದವೀಧರ ಕ್ಷೇತ್ರ ಸಿಗುವ ವ್ಯವಸ್ಥೆ ಈ ಹಿಂದೆ ಇತ್ತು. ಆದ್ರೆ ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಯಾವುದೇ ಸ್ಥಾನ ನೀಡದೆ ಕರಾವಳಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿವೆ. ಪದವೀಧರ ಕ್ಷೇತ್ರದ ಅಭ್ಯರ್ಥಿಯು ಇಲ್ಲ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯು ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲೂ ಬಿಜೆಪಿಯಲ್ಲಿ ಬಂಡಾಯ: ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್

ನಾನು ಬಿಜೆಪಿಯಿಂದ ಟಿಕೆಟ್​ ನಿರೀಕ್ಷೆ ಮಾಡಿದ್ದೆ. ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಅರ್ಹವಾದ ಸಾಕಷ್ಟು ಜನ ಇದ್ದರು. ಆದ್ರೆ ಅಂತವರನ್ನು ನಿರ್ಲಕ್ಷ್ಯ ಮಾಡಿದಕ್ಕೆ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಅಭ್ಯರ್ಥಿ ಘೋಷಣೆ ಮೊದಲು ಯಾರು ಯಾರನ್ನು ಭೇಟಿ‌ ಆಗಬೇಕು ಅವರೆಲ್ಲರನ್ನು ಭೇಟಿಯಾಗಿದ್ದೇನೆ. ಶಿಕ್ಷಕರ ಜೊತೆ ಸಂಪರ್ಕವನ್ನು ಮಾಡಿದ್ದೇನೆ. ಶಿಕ್ಷಕರಿಗೆ ಯಾರಾದರೂ ಒಬ್ಬ ಅಭ್ಯರ್ಥಿ ಸೂಕ್ತ ಅಂತ ಕಂಡ್ರೆ ಪಕ್ಷಭೇದ ಮರೆತು ಮತ ಹಾಕುತ್ತಾರೆ. ಈ ಕ್ಷೇತ್ರದ ಸಂಪ್ರದಾಯವೇ ಹಾಗೆ. ಶಿಕ್ಷಕರ ಜೊತೆ ನಿರಂತರ ಚರ್ಚೆ ಮಾಡಿ ಅಂತಿಮವಾಗಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಶಿಕ್ಷಕರಿಗೆ ನನ್ನ ಸಂಪೂರ್ಣ ಪರಿಚಯವಿದೆ. ಶಿಕ್ಷಕರಿಗಾಗಿ ಏನು ಮಾಡಬಹುದು ಎಂದು ಸರಿಯಾಗಿ ಗೊತ್ತಿದೆ. ಹೀಗಾಗಿ ಶಿಕ್ಷಕರು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸುವ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.