ಮಂಗಳೂರು: ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಧಿಕೃತವಾಗಿ ಎನ್ಐಎ ಅಧಿಕಾರಿಗಳಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
ಎನ್ಐಎ ಅಧಿಕಾರಿಗಳ ತನಿಖೆ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ಪೊಲೀಸರು ಶಾರಿಕ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಖುದ್ದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ತನಿಖಾಧಿಕಾರಿ ಪಿ.ಎ.ಹೆಗ್ಡೆ ನೇತೃತ್ವದಲ್ಲೇ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ತನಿಖಾ ತಂಡ ಶಾರಿಕ್ ಹೇಳಿಕೆ ವಿಡಿಯೋ ರೆಕಾರ್ಡ್ ಮಾಡಿದೆ. NIA ಅಧಿಕಾರಿಗಳು ಇಂದಿನಿಂದ ಪ್ರತ್ಯೇಕ ಹೇಳಿಕೆ ಪಡೆಯಲಿದ್ದಾರೆ.
ಇದನ್ನೂ ಓದಿ: ಆಟೋದಲ್ಲಿ ನಿಗೂಢ ಸ್ಪೋಟ: ಪ್ರಯಾಣಿಕ ಬೇರೆಡೆ ಹೋಗಿ ಬಾಂಬ್ ಬ್ಲಾಸ್ಟ್ ಮಾಡುವ ಉದ್ದೇಶ ಹೊಂದಿದ್ದರು – ಎಡಿಜಿಪಿ ಅಲೋಕ್ಕುಮಾರ್
ಕಳೆದ ತಿಂಗಳ ನವೆಂಬರ್ 20ರಂದು ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್, ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಘಟನೆಯಲ್ಲಿ ಗಾಯಗೊಂಡಿದ್ದ ಶಾರಿಕ್ ಒಬ್ಬ ಶಂಕಿತ ಉಗ್ರನೆಂಬ ಬಗ್ಗೆ ಬಲವಾದ ಸಾಕ್ಷ್ಯಗಳು, ಅನುಮಾನಗಳು ವ್ಯಕ್ತವಾದವು. ದಿನದಿಂದ ದಿನಕ್ಕೆ ಈ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ.
ಮಂಗಳೂರಿನ ಆಟೋದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರು ಪ್ರಾಥಮಿಕ ತನಿಖೆ ಮಾಡಿದ್ದಾರೆ. ಈ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಆಧರಿಸಿ ರಾಜ್ಯ ಸರ್ಕಾರ ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಸದ್ಯ ಈಗ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಧಿಕೃತವಾಗಿ ಎನ್ಐಎ ಅಧಿಕಾರಿಗಳಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ. ಹೀಗಾಗಿ ಇಂದಿನಿಂದಲೇ ಎನ್ಐಎ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಲಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:37 am, Thu, 1 December 22