ನಕಲಿ ಕ್ಯೂಆರ್ ಕೋಡ್ ಮೂಲಕ 12 ಲಕ್ಷ ರೂ. ವಂಚನೆ: ಆರು ಆರೋಪಿಗಳ ಬಂಧನ
ಮಂಗಳೂರಿನ ಖಾಸಗಿ ಸಂಸ್ಥೆಯೊಂದರ ಅಸಲಿ ಕ್ಯೂಆರ್ ಕೋಡ್ ಮೇಲೆ ನಕಲಿ ಸ್ಟಿಕ್ಕರ್ ಅಂಟಿಸಿ 12 ಲಕ್ಷ ರೂ. ಹಣವನ್ನು ತಮ್ಮ ಖಾತೆಗೆ ಡೈವರ್ಟ್ ಮಾಡಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಮಂಗಳೂರು CEN ಸೈಬರ್ ಪೊಲೀಸರು ಬಂಧಿಸಿದ್ದಾರೆ. ಡಿಜಿಟಲ್ ಪಾವತಿ ಸ್ವೀಕರಿಸುವ ಮುನ್ನ ಕ್ಯೂಆರ್ ಕೋಡ್‌ಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ವ್ಯಾಪಾರಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು
- ನಕಲಿ ಕ್ಯೂಆರ್ ಕೋಡ್ ಬಳಸಿ 12 ಲಕ್ಷ ವಂಚಿಸಿದ ಆರು ಬಂಧನ.
- ಅಸಲಿ ಕ್ಯೂಆರ್ ಕೋಡ್ ಮೇಲೆ ನಕಲಿ ಸ್ಟಿಕ್ಕರ್ ಅಂಟಿಸಿ ಹಣ ಲೂಟಿ.
- ಡಿಜಿಟಲ್ ಪಾವತಿ ಪರಿಶೀಲಿಸುವಂತೆ ವ್ಯಾಪಾರಿಗಳಿಗೆ ಜಾಗರೂಕರಾಗಿರಲು ಪೊಲೀಸರ ಎಚ್ಚರಿಕೆ.
ಮಂಗಳೂರು, ಅಕ್ಟೋಬರ್ 05: ಕ್ಯೂಆರ್ ಕೋಡ್ ಟ್ಯಾಂಪರಿಂಗ್ ಮಾಡುವ ಮೂಲಕ ಸಂಸ್ಥೆಯೊಂದಕ್ಕೆ ಬರುವ ಹಣವನ್ನು ತಮ್ಮ ಖಾತೆಗಳಿಗೆ ಡೈವರ್ಟ್ ಮಾಡಿ ಸುಮಾರು 12 ಲಕ್ಷ ರೂ. ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಮಂಗಳೂರು ನಗರ ಸೈಬರ್ ಗ್ಯಾಂಗ್ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು, ಬ್ಯಾಂಕ್ ಖಾತೆಗಳ ದಾಖಲೆಗಳು ಹಾಗೂ ವಂಚಿಸಿದ ಹಣದಲ್ಲಿ ಖರೀದಿಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಡೆದಿದ್ದೇನು?
ಮಂಗಳೂರಿನ ಖಾಸಗಿ ವ್ಯಾಪಾರ ಸಂಸ್ಥೆಯೊಂದರಲ್ಲಿ ಗ್ರಾಹಕರು ಹಣ ಪಾವತಿಸಲು ಬಳಸುತ್ತಿದ್ದ ಕ್ಯೂಆರ್ ಕೋಡ್ ಸ್ಟ್ಯಾಂಡ್‌ಗಳನ್ನು ಆರೋಪಿಗಳು ಗುರಿಯಾಗಿಸಿಕೊಂಡಿದ್ದರು. ಅಸಲಿ ಕ್ಯೂಆರ್ ಕೋಡ್ ಮೇಲ್ಭಾಗದಲ್ಲಿ ತಮ್ಮ ಖಾತೆಗೆ ಲಿಂಕ್ ಆಗಿದ್ದ ನಕಲಿ ಕ್ಯೂಆರ್ ಕೋಡ್ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದರು. ಗ್ರಾಹಕರು ಸ್ಕ್ಯಾನ್ ಮಾಡಿ ಪಾವತಿಸುತ್ತಿದ್ದ ಹಣ ನೇರವಾಗಿ ಈ ಆರೋಪಿಗಳ ಖಾತೆಗೆ ಜಮೆಯಾಗುತ್ತಿತ್ತು. ಸಂಸ್ಥೆಯ ಮಾಲೀಕರು ಲೆಕ್ಕಪರಿಶೋಧನೆ ನಡೆಸಿದಾಗ ಆನ್‌ಲೈನ್ ಪಾವತಿ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿತ್ತು. ತಕ್ಷಣ ಜಾಗೃತರಾದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು.
ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಪೋಲಿಸರ ಎಚ್ಚರಿಕೆ
ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸೈಬರ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾರ್ತಿಕ್, ಚೇತನ್, ಪ್ರಜ್ವಲ್, ಧನುಷ್, ಸಂದೀಪ್ ಮತ್ತು ಪ್ರದೀಪ್ ಎಂದು ಗುರುತಿಸಲಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವ ವ್ಯಾಪಾರಿಗಳು ಹಾಗೂ ಸಂಸ್ಥೆಗಳು ತಮ್ಮ ಕ್ಯೂಆರ್ ಕೋಡ್ ಸ್ಟ್ಯಾಂಡ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕು ಮತ್ತು ಕ್ಯೂಆರ್ ಕೋಡ್‌ಗಳ ಮೇಲೆ ಯಾವುದೇ ನಕಲಿ ಸ್ಟಿಕ್ಕರ್‌ಗಳು ಅಂಟಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Mon, 5 October 26




