ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!

|

Updated on: Mar 09, 2023 | 8:06 AM

ತನ್ನ ಮಗಳ ಮೆಡಿಕಲ್ ವ್ಯಾಸಾಂಗದ ಕನಸು ಈಡೇರಿಸಲು ಸೀಟಿಗಾಗಿ ಹುಡುಕಾಡುತ್ತಿದ್ದ ಪೋಷಕರಿಗೆ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಸೈಬರ್ ಖದೀಮರಿಂದ 7.5 ಲಕ್ಷ ರೂ. ವಂಚನೆ!
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ವೈದ್ಯಕೀಯ ವಿದ್ಯಾರ್ಥಿಗೆ ಸೀಟು ಕೊಡಿಸುವುದಾಗಿ ನಂಬಿಸಿ ಪೋಷಕರಿಗೆ 7.5 ಲಕ್ಷ ರೂ.ಗಳನ್ನು ವಂಚಿಸಿದ (Cyber Fraud) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಉಳ್ಳಾಲದಲ್ಲಿ ನಡೆದಿದೆ. ಕ್ಯಾಪಿಟೇಶನ್ ಶುಲ್ಕವಾಗಿ 15 ಲಕ್ಷ ರೂ.ಗಳನ್ನು ಮತ್ತು ಮೊದಲ ವರ್ಷದ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿ ವಂಚನೆ ಜಾಲಕ್ಕೆ ಸಿಲುಕಿದ ಸಂತ್ರಸ್ತ ವ್ಯಕ್ತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ (Ullala Police Station) ದೂರು ದಾಖಲಿಸಿದ್ದು, ಪೊಲೀಸರ ತನಿಖೆ ಆರಂಭಿಸಿದ್ದಾರೆ.

ತನ್ನ ಮಗನಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರು ಕಳೆದ ವರ್ಷ ಡಿಸೆಂಬರ್ 16ರಂದು ಕರೆ ಮಾಡಿದ್ದರು. ತಾನು 50 ಲಕ್ಷ ರೂ. ಒಳಗಿನ ಸೀಟುಗಳನ್ನು ಹುಡುಕುತ್ತಿದ್ದೇನೆ ಎಂದು ವಿದ್ಯಾರ್ಥಿ ತಂದೆ ಹೇಳಿದ್ದಾರೆ. ಇದಾದ ನಂತರ ಇನ್ನೊಬ್ಬ ಮಹಿಳೆಯಿಂದ ಸೀಟಿನ ವಿವರಗಳೊಂದಿಗೆ ಕರೆ ಬಂದಿದ್ದು, ಇದಕ್ಕಾಗಿ ಕ್ಯಾಪಿಟೇಶನ್ ಶುಲ್ಕವಾಗಿ 15 ಲಕ್ಷ ರೂ.ಗಳನ್ನು ಮತ್ತು ಮೊದಲ ವರ್ಷದ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ. ಹಾಸ್ಟೆಲ್ ಉಚಿತವಾಗಿರುತ್ತದೆ ಮತ್ತು ದಾಖಲೆಗಳನ್ನು ವಾಟ್ಸ್​ಆ್ಯಪ್ ಮೂಲಕ ಕಳುಹಿಸುವಂತೆ ಸೂಚಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೈಬರ್ ಖದೀಮರ ಮಾತನ್ನು ನಂಬಿದ ವಿದ್ಯಾರ್ಥಿಯ ತಂದೆ, ಡಿಸೆಂಬರ್ 17 ರಂದು ತನ್ನ ಹೆಂಡತಿಯ ಬ್ಯಾಂಕ್ ಖಾತೆಯಿಂದ 7.5 ಲಕ್ಷ ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಪಡೆದು ಅದರ ಫೋಟೋವನ್ನು ವಾಟ್ಸ್​​ಆ್ಯಪ್​ನಲ್ಲಿ ಹಂಚಿಕೊಂಡರು. ಮರುದಿನ ತನ್ನ ಮಗನ ದಾಖಲೆಗಳ ಫೋಟೋಗಳನ್ನು ಕಳುಹಿಸಿದರು. ಡಿಸೆಂಬರ್ 20ರಂದು ಹಿರಿಯ ಅಧಿಕಾರಿಯೊಬ್ಬರ ಸೋಗಿನಲ್ಲಿ ಕರೆ ಬಂದಿದ್ದು, ವೈದ್ಯಕೀಯ ಸೀಟು ಖಚಿತವಾಗಿದೆ. ಡಿಸೆಂಬರ್ 21ರಂದು ಕಾಲೇಜಿಗೆ ಬರುವಂತೆ ತಿಳಿಸಿದ್ದರು.

ಇದನ್ನೂ ಓದಿ: ಸೈಬರ್ ವಂಚನೆಯಿಂದ ₹8 ಲಕ್ಷ ಕಳೆದುಕೊಂಡ ರೈತ; ಸೈಬರ್ ಸೆಲ್​​ಗೆ ದೂರು ನೀಡಿ ಖಾತೆಯಿಂದ ಹೋದ ಹಣವನ್ನು ಮರಳಿ ಪಡೆದಿದ್ದು ಹೀಗೆ

ಅದರಂತೆ, ವಿದ್ಯಾರ್ಥಿ ಮತ್ತು ಆತನ ತಂದೆ ಕಾಲೇಜಿಗೆ ಭೇಟಿ ನೀಡಿದಾಗ ಓರ್ವ ವ್ಯಕ್ತಿ ಇವರ ಬಳಿ ಬಂದು ಹೊಟೇಲ್​​ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈಗಾಗಲೇ ಪ್ರವೇಶವನ್ನು ದೃಢಪಡಿಸಿದ್ದರಿಂದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಲು ಕೇಳಲಾಯಿತು. ಆ ವ್ಯಕ್ತಿ ದಾಖಲೆಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಯ ತಂದೆ ಫಾರ್ಮ್​​ಗಳನ್ನು ಭರ್ತಿ ಮಾಡಿ ತನ್ನ ಮಗನ ಫೋಟೋ ಮತ್ತು 7.5 ಲಕ್ಷ ರೂ.ಗಳ ಡಿಡಿಯನ್ನು ಲಗತ್ತಿಸಿ ಅವರಿಗೆ ಒಪ್ಪಿಸಿ ಮನೆಗೆ ಮರಳಿದ್ದಾರೆ.

ನಂತರ, ಡಿಸೆಂಬರ್ 27 ರಂದು ವಿದ್ಯಾರ್ಥಿಯ ತಂದೆಗೆ ಕರೆ ಬಂದಿದ್ದು, ವೈದ್ಯಕೀಯ ಸೀಟ್ ಖಚಿತಪಡಿಸುತ್ತಾರೆ ಮತ್ತು ಜನವರಿ 6 ರಿಂದ ತರಗತಿಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಡಿಮ್ಯಾಂಡ್ ಡ್ರಾಫ್ಟ್ ಅನ್ನು ತೆರವುಗೊಳಿಸಲು ಸಾಧ್ಯವಾಗದ ಕಾರಣ ಡಿಡಿ ರದ್ದುಗೊಂಡಿದ್ದು 7.5 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಮೊತ್ತವನ್ನು ಹೈದರಾಬಾದ್ ವಿಮಾನ ನಿಲ್ದಾಣದ ಬಳಿ ವ್ಯಕ್ತಿಗೆ ಪಾವತಿಸಬಹುದು ಎಂದು ಸೂಚಿಸುತ್ತಾರೆ.

ಅದರಂತೆ, ಡಿಸೆಂಬರ್ 29 ರಂದು ವಿದ್ಯಾರ್ಥಿ ಹಾಗೂ ಆತನ ತಂದೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಸಂಜೆಯಾದರೂ ತಮ್ಮ ಬಳಿ ಯಾರೂ ಬಾರದೇ ಇದ್ದಾಗ ಮರಳಿ ಹಿಂದಿರುಗಲು ಮುಂದಾಗಿದ್ದಾರೆ. ಈ ವೇಳೆ ಭೇಟಿಯಾದ ಪ್ರತಿನಿಧಿಯೊಬ್ಬನಿಗೆ ಹಣವನ್ನು ನೀಡಿ ಹಿಂದಿರುಗುತ್ತಾರೆ. ಆದರೆ ಜನವರಿ 5 ರಂದು ವಿದ್ಯಾರ್ಥಿ ಕಾಲೇಜಿಗೆ ತಲುಪಿ ಪ್ರವೇಶ ಪತ್ರದ ಸಾಫ್ಟ್ ಕಾಪಿಯನ್ನು ತೋರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬರುತ್ತದೆ.

ಘಟನೆ ಬಗ್ಗೆ ಮಾತನಾಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶು ಕುಮಾರ್, “ಪಿಜಿ ಸೀಟ್ ಆಕಾಂಕ್ಷಿಯೊಬ್ಬರು ಸಹ ಮೋಸಹೋಗಿದ್ದು, ಸುಮಾರು 50 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಎರಡೂ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಕಾರ್ಯವಿಧಾನವು ಒಂದೇ ಆಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ” ಎಂದು ಹೇಳಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ