ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು ಎನ್ನುವ ಮಿಥುನ್ ರೈ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿರುಗೇಟು
‘ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು, ಎಂಬ ಮಿಥುನ್ ರೈ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಿರುಗೇಟು ಕೊಟ್ಟಿದ್ದಾರೆ. ‘ಯಾರೇ ಯಾವ ಹೇಳಿಕೆಯನ್ನ ಕೊಡಬಹುದು. ಆದರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂತಾದ್ರೆ ಅದಕ್ಕೆ ಯುಕ್ತವಾದ ಆಧಾರವನ್ನ ಕೊಟ್ಟರೆ ಮಾತ್ರ ಆ ಮಾತಿಗೆ ಬೆಲೆ ಇರುತ್ತದೆ ಎಂದಿದ್ದಾರೆ.
ತುಮಕೂರು: ‘ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು, ಎಂಬ ಮಿಥುನ್ ರೈ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(vishwa prasanna theertha swamiji)ಯವರು ತಿರುಗೇಟು ಕೊಟ್ಟಿದ್ದಾರೆ. ‘ಯಾರೇ, ಯಾವ ಹೇಳಿಕೆಯನ್ನ ಕೊಡಬಹುದು. ಆದರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂತಾದರೆ ಅದಕ್ಕೆ ಯುಕ್ತವಾದ ಆಧಾರವನ್ನ ಕೊಟ್ಟರೆ ಮಾತ್ರ ಆ ಮಾತಿಗೆ ಬೆಲೆ ಇರುತ್ತದೆ. ಆದರೆ ಆಧಾರ ರಹಿತವಾದ ಹೇಳಿಕೆ ಇಟ್ಟುಕೊಂಡು ಚರ್ಚಿಸಿದರೆ ಅದಕ್ಕೆ ಅರ್ಥವಿಲ್ಲ. ಕೃಷ್ಣ ಮಠಕ್ಕೆ ರಾಮಭೋಜ ಅರಸ ಜಾಗ ಕೊಟ್ಟಿದ್ದಕ್ಕೆ ಆಧಾರಗಳಿವೆ, ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀ ಹೇಳಿದ್ದಾರೆ.
ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ರು. ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನ ದಾಟಬೇಕಿತ್ತು. ಅಲ್ಲೊಬ್ಬ ತುರ್ಕರ ರಾಜ ಆಳ್ವಿಕೆ ಮಾಡುತ್ತಿದ್ದನು. ನದಿ ದಾಟಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಆತ ನಿಲ್ಲಿಸಿದ್ದ. ಆಗ ಮಧ್ವಾಚಾರ್ಯರು ಗಂಗಾ ನದಿಯನ್ನ ಈಜಿಯೇ ದಾಟಲು ಮುಂದಾದರು. ಬಳಿಕ ಶಿಷ್ಯರಿಗೆ ತಮ್ಮ ಕಾಲನ್ನ ಹಿಡಿದುಕೊಳ್ಳಲು ಹೇಳಿದರು. ಆಗ ತುರ್ಕ ರಾಜನ ಸೈನಿಕರು ಇವರತ್ತ ಓಡಿಬಂದರು. ಆದರೆ ಮಧ್ವಾಚಾರ್ಯರು ಸ್ವಲ್ಪವೂ ಹೆದರದೇ ಅವರಿಗೆ ತಿಳಿ ಹೇಳಿದರು.
ಆಗ ಆಚಾರ್ಯರ ವ್ಯಕ್ತಿತ್ವವನ್ನ ಕಂಡು ಆ ರಾಜ ಅಲ್ಲಿನ ಅರ್ಧ ರಾಜ್ಯವನ್ನ ದಾನ ಮಾಡುತ್ತಾನೆ. ಅದನ್ನ ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆ ಹೊರತು, ಉಡುಪಿ ಮಠದ ಜಾಗವನ್ನ ಮುಸ್ಲಿಂ ರಾಜರು ನೀಡಿದ್ದು ಎಂದು ಹೇಳಿದ್ದಲ್ಲ. ಈ ಗೊಂದಲದಿಂದ ಅವರು ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಆದ್ರೆ ಅದು ಆಧಾರ ರಹಿತವಾಗಿರೋದ್ರಿಂದ ಈ ಚರ್ಚೆಯನ್ನ ಮುಂದುವರಿಸೋದು ಅರ್ಥಹೀನ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.
ನಾನು ಯಾವುದೇ ಇತಿಹಾಸಕಾರನಲ್ಲ ಎಂದ ಮಿಥುನ್ ರೈ
ಮಂಗಳೂರು: ಕೃಷ್ಣಮಠದ ಜಾಗವನ್ನು ಮುಸ್ಲಿಂ ರಾಜರು ನೀಡಿದ್ದಾರೆ ಎಂಬ ಹೇಳಿಕೆ ನೀಡಿರುವ ಮಿಥುನ್ ರೈ, ಇದೀಗ ಟಿವಿ9 ಪ್ರತಿನಿಧಿಯೊಂದಿಗೆ ಮೂಡಬಿದ್ರೆಯಲ್ಲಿ ಮಾತನಾಡಿದ್ದಾರೆ. ‘ನಾನು ಹೇಳಿಕೆ ನೀಡುವಾಗ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಕೂಡ ವೇಧಿಕೆಯಲ್ಲಿದ್ರು, ಜಿಲ್ಲೆಯಲ್ಲಿ ಸೌಹಾರ್ದತೆಯ ಒಡಕು ಮೂಡಬಾರದು ಎಂದು ನಾನು ಈ ವಿಚಾರ ಮಾತನಾಡಿದೆ. ನಾನು ಉಡುಪಿ ಮಠದ ಪೇಜಾವರ ಶ್ರೀಗಳು ಈ ಹಿಂದೆ ಹೇಳಿದ್ದನ್ನೇ ಪುನರುಚ್ಚರಿಸಿದ್ದೇನೆ. ಅವರು ಹೇಳಿದ ಮಾತನ್ನೇ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಅದನ್ನೇ ನಾನು ಉಲ್ಲೇಖಿಸಿದ್ದು, ನಾನು ತಪ್ಪು ಸಂದೇಶ ನೀಡಲು ಹೊರಟಿರಲಿಲ್ಲ. ತಪ್ಪಾಗಿದ್ದರೆ ನಾನು ಕ್ಷಮಾಪಣೆ ಬೇಕಾದರು ಕೇಳುತ್ತೇನೆ. ಬೇಕಾದರೆ ಉಡುಪಿ ಶಾಸಕ ರಘುಪತಿ ಭಟ್ ಪೇಜಾವರ ಶ್ರೀಗಳನ್ನ ಈ ಬಗ್ಗೆ ಹೋಗಿ ಕೇಳಲಿ ಎಂದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Wed, 8 March 23