ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೀಸಿದ ಬಿಸಿಗಾಳಿ, ದೇಶದಲ್ಲೇ ಮೊದಲು
ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ಬಿಸಿಗಾಳಿಯಿಂದ ಜನರು ಕಂಗಲಾಗಲಿದ್ದಾರೆ. ಮಾರ್ಚ್‌ನಿಂದ ಮೇ ಋತುವಿನಲ್ಲಿ ಬಿಸಿಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿರಲಿದೆ" ಎಂದು ಭಾರತೀಯ ಹವಾಮಾನ ಇಲಾಖೆ (IMD)ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ಕರಾವಳಿಗರಿಗೆ ಬಿಸಿಗಾಳಿ ಶಾಕ್ ಕೊಟ್ಟಿದೆ.
ಬೆಂಗಳೂರು: ಅರಬ್ಬೀ ಸಮುದ್ರದ (Arabian Sea) ಮೇಲೆ ಆಂಟಿಸೈಕ್ಲೋನ್ (Anticyclone) ಗಾಳಿ ಬೀಸಿದ ಪರಿಣಾಮ ಕರಾವಳಿ ಪ್ರದೇಶದ ಎರಡು ಜಿಲ್ಲೆಗಳಾದ ದಕ್ಷಿಣ (Dakshin Kannada) ಮತ್ತು ಉತ್ತರ ಕನ್ನಡ (Uttar Kannada) ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸೋಮವಾರದವರೆಗು ಬಿಸಿ ಗಾಳಿ ಬೀಸಿದೆ. ಈ ಬೇಸಿಗೆಗಾಲದಲ್ಲಿ ದೇಶದಲ್ಲೇ ಇದೇ ಮೊದಲ ಬಿಸಿಗಾಳಿಯಾಗಿದೆ. ಶನಿವಾರ (ಮಾ.4) ರಂದು ದೇಶದ ವಿವಿಧ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ಮತ್ತು ಹೊನ್ನಾವರದಲ್ಲಿ (Honnavar) 39 ರಿಂದ 40.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸಾಮನ್ಯ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿತ್ತು.
ರವಿವಾರ (ಮಾ.5) ರಂದು ಗೋವಾದಲ್ಲಿ ಅತಿ ಹೆಚ್ಚಿನ 37.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇನ್ನು ಮುಂಬೈನಲ್ಲಿ 38.1 ಡಿಗ್ರಿ ಸೆಲ್ಸಿಯಸ್, ಹೊನ್ನಾವರದಲ್ಲಿ 37.3 ಡಿಗ್ರಿ ಸೆಲ್ಸಿಯಸ್, ಕನ್ನುರ್ನಲ್ಲಿ 37.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆಂಟಿಸೈಕ್ಲೋನಿಕ್ನಿಂದ ಪಶ್ಚಿಮ ಕರಾವಳಿಯಲ್ಲಿ ಬೆಚ್ಚಗಿನ ವಾತಾವರಣವಿರುತ್ತದೆ. ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಬಿಸಿ ಗಾಳಿ ಅಪರೂಪವಾಗಿದ್ದು, ಈ ಬಾರಿ ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ ಆದರೆ ಅದೃಷ್ಟವಶಾತ್ ಬೆಚ್ಚಗಿನ ಅನುಭವ ಕಡಿಮೆಯಾಗಿತ್ತು. ತಾಪಮಾನವು ಮತ್ತೆ ಕುಸಿಯಲು ಪ್ರಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯ ಮಹಾನಿರ್ದೇಶಕ ಎಂ ಮೊಹಾಪಾತ್ರ ಹೇಳಿದ್ದಾರೆ.
ಪಶ್ಚಿಮ ಕರಾವಳಿಯ ಪ್ರದೇಶಗಳಲ್ಲಿ ಮಾರ್ಚ್‌ನಲ್ಲಿ ಬಿಸಿ ಗಾಳಿ ಬೀಸುತ್ತದೆ. ಮತ್ತು ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ಪೂರ್ವ ಕರಾವಳಿ ಪ್ರದೇಶಗಳಾದ ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಆಂಟಿಸೈಕ್ಲೋನ್‌ನಿಂದ ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇಂದಿನಿಂದ (ಮಾ.7) ರಾಜ್ಯದ ಕರಾವಳಿ ಪ್ರದೇಶದಲ್ಲಿ ಬಿಸಿ ಗಾಳಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನಶಾಸ್ತ್ರಜ್ಞ ಮಹೇಶ್ ಪಲಾವತ್ ಹೇಳಿದರು.
ಗುಜರಾತ್, ಮಹಾರಾಷ್ಟ್ರ, ವಿದರ್ಭ, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 35-38 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದ ರಾಜ್ಯಗಳಲ್ಲಿ 31-35 ಡಿಗ್ರಿ ಸೆಲ್ಸಿಯಸ್, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ 28-31 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಬ್ಯೂರೋ ತಿಳಿಸಿದೆ.
ವಾಯುವ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ, ಪಶ್ಚಿಮ ಕರಾವಳಿಯಲ್ಲಿ ಮತ್ತು ದೇಶದ ಉಳಿದ ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಹವಮಾನ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಫೆಬ್ರವರಿ ಮಧ್ಯದಿಂದಲೇ ದೇಶದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಲು ಪ್ರಾರಂಭಿಸಿತು. ಗುಜರಾತ್, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಭಾಗಗಳಲ್ಲಿ ಸಾಮಾನ್ಯಕ್ಕಿಂತ 5-10 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನವಿತ್ತು. ಮಾರ್ಚ್‌ನಿಂದ ಜೂನ್ವರೆಗು ವಾಯುವ್ಯ ಭಾರತ, ಮಧ್ಯ, ಪೂರ್ವ ಮತ್ತು ಉತ್ತರದ ಬಯಲು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Tue, 7 March 23