ಮಂಗಳೂರು, ಜನವರಿ 24: ಇಸ್ರೇಲ್ ಹಮಾಸ್ (Hamas) ಉಗ್ರರ ಮೇಲೆ ತನ್ನ ದಾಳಿಯನ್ನು ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಯೆಮನ್ ದೇಶದ ಹೌತಿ ಬಂಡುಕೋರರು ಇಸ್ರೇಲ್ ಪರ ನಿಂತಿರುವ ಹಡಗುಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮ ಆಮದು ಮತ್ತು ರಫ್ತಿನ ಮೇಲಾಗುತ್ತಿದ್ದು ರಾಜ್ಯ ಕರಾವಳಿಯ ಗೋಡಂಬಿ ಉದ್ಯಮವು ತೂಗುಗತ್ತಿಯಲ್ಲಿದೆ. ಕೆಂಪು ಸಮುದ್ರ ಹಾಗೂ ಸೂಯೆಜ್ ಕಾಲುವೆಯಲ್ಲಿ ಹೌತಿ ಬಂಡುಕೋರರು ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಪರವಾಗಿ ನಿಂತ ದೇಶದ ಸರಕು ಸಾಗಾಣೆ ಹಡಗುಗಳು ಸಾಗುವಾಗ ದಾಳಿ ಮಾಡ್ತಿದ್ದಾರೆ. ಇದರಿಂದ ಆಮದು ಮತ್ತು ರಫ್ತನ್ನು ನಂಬಿಕೊಂಡ ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತ ಬೀಳುತ್ತಿದೆ.
ರಾಜ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಗೇರುಬೀಜ ಸಂಸ್ಕರಣಾ ಘಟಕಗಳಿವೆ. ಅದರಲ್ಲಿ 320ಕ್ಕೂ ಹೆಚ್ಚು ಫ್ಯಾಕ್ಟರಿಗಳು ಕರಾವಳಿಯಲ್ಲಿದೆ. ಈ ಫಾಕ್ಟರಿಗಳಿಗೆ ಹೆಚ್ಚಾಗಿ ಕಚ್ಚಾ ಗೇರುಬೀಜ ಬರುವುದು ಆಫ್ರಿಕಾ ಖಂಡದಿಂದ. ಆದರೆ ಇದೀಗ ಹೌತಿ ಬಂಡುಕೋರರ ದಾಳಿಯಿಂದ ಹಡಗಿನ ಸಂಚಾರದಲ್ಲಿ ವ್ಯತ್ಯಯ ಆಗಿ ಆಫ್ರಿಕಾದಿಂದ ಕಚ್ಚಾ ಗೋಡಂಬಿ ಬಾರದೆ ತೊಂದರೆಯಾಗುತ್ತಿದೆ.
ಸುತ್ತು ಬಳಸಿ ಹೆಚ್ಚುವರಿ 6,300 ನಾಟಿಕಲ್ ಮೈಲುಗಳ ಸಂಚಾರ ಮಾಡಿ ಬಂದರೆ 15 ಹೆಚ್ಚುವರಿ ದಿನಗಳ ಪ್ರಯಾಣ ಮಾಡಬೇಕಾಗಿದೆ. ಇದರ ಜೊತೆ ಪ್ರತಿ ಕಂಟೇನರ್ ಸಾಗಾಟ ದರ 2,000 ಡಾಲರ್‌ಗಿಂತ ಹೆಚ್ಚಾಗಿದ್ದು, ಈ ಏರಿಕೆ ಗೇರು ಉದ್ಯಮಕ್ಕೆ ತಲೆನೋವಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಲಿನ ಕೊರತೆ: ದಿನವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ಅಭಾವ
ಆಮದು ಮಾಡಿದ ಗೇರುಬೀಜಗಳನ್ನು ಫಾಕ್ಟರಿಯಲ್ಲಿ ವಿವಿಧ ಹಂತಗಳ ಮೂಲಕ ಸಂಸ್ಕರಿಸಲಾಗುತ್ತದೆ. ಸಂಸ್ಕರಿಸಿದ ಗೋಡಂಬಿಯನ್ನು ಯುರೋಪ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹಡಗಿನ ಮೂಲಕವೇ ರಫ್ತು ಮಾಡಲಾಗುತ್ತದೆ. ಆದರೆ ಇದೀಗ ಆಮದಿನ ಜೊತೆ ರಫ್ತು ಮಾಡುವುದಕ್ಕೂ ಕಷ್ಟ ಸಾಧ್ಯವಾಗುತ್ತಿದೆ.
ಗೋಡಂಬಿ ಕೃಷಿ ಉತ್ಪನ್ನ ಆಗಿರುವುದರಿಂದ ನಿಗದಿತ ಜಾಗ ತಲುಪಲು ವಿಳಂಬಗೊಂಡು ನಷ್ಟ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಭಾರತ ಈಗ 13 ಲಕ್ಷ ರೂ. ಮೆಟ್ರಿಕ್ ಟನ್ ಗೇರು ಆಮದಿನ ಮೇಲೆ ಅವಲಂಬಿತವಾಗಿದೆ. ರಾಜ್ಯದಲ್ಲಿ 3 ಲಕ್ಷ ಟನ್ ಗೇರುಬೀಜಕ್ಕೆ ಬೇಡಿಕೆಯಿದ್ದು ಇದರಲ್ಲಿ ಸುಮಾರು 50 ಸಾವಿರ ಟನ್ ಗೇರುಬೀಜ ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದ ಸುಮಾರು 2.50 ಲಕ್ಷ ಟನ್ ಗೇರುಬೀಜವನ್ನು ಆಫ್ರಿಕಾ ಸಹಿತ ಬೇರೆ ದೇಶದಿಂದ ಆಮದು ಮಾಡಲಾಗುತ್ತಿದೆ. ಆದರೆ ಇದೀಗ ಕಚ್ಚಾ ಗೋಡಂಬಿ ಸಕಾಲದಲ್ಲಿ ಪೂರೈಕೆಯಾಗದೇ ಇದ್ದರೆ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಹ ಪರಿಸ್ಥಿತಿ ಸನ್ನಿಹಿತವಾಗಲಿದೆ.
ಕರಾವಳಿಯಲ್ಲಿರುವ ಕೆಲವೇ ಕೆಲವು ಸಾಂಪ್ರದಾಯಿಕ ಉದ್ಯಮಗಳಲ್ಲಿ ಈ ಗೇರು ಉದ್ಯಮವು ಒಂದು. ಆದರೆ ಕೋವಿಡ್ ಬಳಿಕ ಒಂದೊಂದು ಕಾರಣದಿಂದ ಉದ್ಯಮ ನಡೆಸುವುದೇ ಸವಲಾಗುತ್ತಿದ್ದು ರಾಜ್ಯ, ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಗೇರು ಉದ್ಯಮಿಗಳು ಒತ್ತಾಯಿಸಿದ್ದಾರೆ. ಸದ್ಯ ಬಂಡುಕೋರರ ದಾಳಿಯಿಂದಲು ಗೇರು ಉದ್ಯಮ ಬಡವಾಗುತ್ತಿದ್ದು ಮುಂದೇನಾಗುತ್ತೆ ಎಂದು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.