ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಲಿನ ಕೊರತೆ: ದಿನವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ಅಭಾವ
ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಲಿನ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಕುಸಿತವಾಗಿದೆ. ಪರಿಣಾಮ ಹಾಲಿನ ಕೊರತೆ ಎದುರಾಗಿದೆ. ಹೈನುಗಾರಿಕೆಯಿಂದ ಜನ ವಿಮುಖರಾಗುತ್ತಿರುವುದೂ ಜಿಲ್ಲಾಡಳಿತಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹಾಲಿನ ಕೊರತೆಗೆ ಪ್ರಮುಖ ಕಾರಣಗಳೇನು? ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಮಂಗಳೂರು, ಜನವರಿ 23: ಜನ ಹೈನುಗಾರಿಕೆಯಿಂದ ವಿಮುಖರಾಗುತ್ತಿರುವ ಪರಿಣಾಮ ಉಡುಪಿ (Udupi) ಸೇರಿದಂತೆ ಅವಿಭಜಿತ ದಕ್ಷಿಣಕನ್ನಡ (Dakshina Kannada) ಜಿಲ್ಲೆಯಲ್ಲಿಯು ಹಾಲಿನ ಕೊರತೆ (Milk Shortage) ಎದುರಾಗಿದೆ. ಹಾಲಿನ ಕೊರತೆ ನೀಗಿಸಲು ಪಕ್ಕದ ಜಿಲ್ಲೆಗಳನ್ನು ಅವಲಂಬಿಸುವ ಪರಿಸ್ಥಿತಿ ಬಂದಿದೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಹೆಚ್ಚಿನ ರೈತರು ಹೈನುಗಾರಿಕೆಯನ್ನೇ ನಡೆಸಿಕೊಂಡು ಬಂದವರು. ಕೃಷಿ ಚಟುವಟಿಕೆಗೆ, ಉತ್ತಮ ಆರೋಗ್ಯಕ್ಕೆ, ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಮನೆಗಳಲ್ಲಿ ಗೋವುಗಳನ್ನು ಸಾಕುತ್ತಿದ್ದರು. ಆದರೆ, ಇದೀಗ ನಗರೀಕರಣದ ಪ್ರಭಾವ, ಯುವಕ-ಯುವತಿಯರಲ್ಲಿ ಹೈನುಗಾರಿಕೆ ಬಗ್ಗೆ ನಿರಾಸಕ್ತಿ, ಉತ್ಪಾದನಾ ವೆಚ್ಚ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳಿಂದ ಹೈನುಗಾರಿಕೆ ಬಡವಾಗುತ್ತಿದೆ.
ವಿವಿಧ ಕಾರಣಗಳ ಪರಿಣಾಮ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲಿನ ಕೊರತೆ ಕಂಡುಬಂದಿದೆ. ಈ ಎರಡು ಜಿಲ್ಲೆಗಳಲ್ಲಿ ಪ್ರತಿನಿತ್ಯ ಸುಮಾರು ಮೂರು ಲಕ್ಷದ ಎಪ್ಪತ್ತು ಸಾವಿರ ಲೀಟರ್ ಹಾಲಿನ ಸಂಗ್ರಹವಾದರೆ, ಸುಮಾರು ಐದು ಲಕ್ಷದ ಇಪ್ಪತ್ತು ಸಾವಿರ ಲೀಟರ್ ಹಾಲಿಗೆ ಬೇಡಿಕೆ ಬರುತ್ತಿದೆ. ಹೀಗಾಗಿ ಕೊರತೆಯಾಗುತ್ತಿರುವ ಒಂದೂವೆರ ಲಕ್ಷ ಲೀಟರ್ ಹಾಲಿಗಾಗಿ ಮಂಡ್ಯ, ಹಾಸನ, ಶಿವಮೊಗ್ಗ, ಮೈಸೂರು ಜಿಲ್ಲೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಲವು ಆಫರ್!
ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ 2022ರ ವರೆಗೆ ಈ ಸಮಸ್ಯೆ ಇರಲಿಲ್ಲ. ಆದರೆ, ಇದೀಗ ಬೇಡಿಕೆ ಹೆಚ್ಚಾದಂತೆ ಕೊರತೆ ಇನ್ನಷ್ಟು ಹೆಚ್ಚಾಗುತ್ತಿದೆ. ಸದ್ಯ ಹೊರ ಜಿಲ್ಲೆಯಿಂದ ಹಾಲು ತರಿಸುವ ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿದ್ದು, ಇದಕ್ಕಾಗಿ ಹಾಲಿನ ಇತರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಜೊತೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ಸ್ಲರಿ ಪಂಪ್, ಪಶು ಆಹಾರ, ರಾಸುಗಳ ವಿಮೆ, ಹುಲ್ಲು ಕತ್ತರಿಸುವ ಯಂತ್ರ, ಒಂದು ಎಕರೆ ಹಸಿರು ಹುಲ್ಲು ಬೆಳೆಸಿದರೆ ಇಪ್ಪತ್ತು ಸಾವಿರ ಸಬ್ಸಿಡಿ ಸೇರಿದಂತೆ ಹಲವು ಆಫರ್ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸಲು ಒಕ್ಕೂಟ ಮುಂದಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಉರುಳು ಸೇವೆ ಮಾಡಿ ಹರಕೆ ಸಲ್ಲಿಸಿದ ಶಾಸಕ ವೇದವ್ಯಾಸ್ ಕಾಮತ್
ಹೈನುಗಾರಿಕೆ ನಿರಾಸಕ್ತಿಗೆ ಪ್ರಮುಖ ಕಾರಣವೇನು?
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಸಿರು ಹುಲ್ಲಿನ ಕೊರತೆ, ಪಶು ಆಹಾರಗಳ ದರ ಏರಿಕೆ, ಯುವ ಜನರಲ್ಲಿ ಹೈನುಗಾರಿಕೆ ಬಗ್ಗೆ ನಿರಾಸಕ್ತಿ ಹಾಲಿನ ಕೊರತೆ ಉಂಟಾಗಲು ಮುಖ್ಯ ಕಾರಣವಾಗಿದೆ. ಸದ್ಯ ದಿನವೊಂದಕ್ಕೆ ಒಂದೂವರೆ ಲಕ್ಷ ಲೀಟರ್ ಹಾಲಿನ ಕೊರತೆ ಉಂಟಾಗುತಿದ್ದು ಮುಂದೆ ಇದು ಇನ್ನಷ್ಟು ಹೆಚ್ಚಾಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ