Mangaluru Jaleel Murder Case: ಕಾಟಿಪಳ್ಳಕ್ಕೆ ಜಲೀಲ್ ಮೃತದೇಹ ರವಾನೆ; ಸುರತ್ಕಲ್ ಸುತ್ತಮುತ್ತ ಅಘೋಷಿತ ಬಂದ್ ವಾತಾವರಣ
ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ನಡೆದ ಜಲೀಲ್ ಕೊಲೆ ಪ್ರಕರಣದ ನಂತರ ಸುರತ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಮಂಗಳೂರು: ಕಾಟಿಪಳ್ಳದಲ್ಲಿ ಚಾಕು ಇರಿದು ಅಬ್ದುಲ್ ಜಲೀಲ್ ಹತ್ಯೆ ಪ್ರಕರಣ (Abdul Jaleel Murder Case)ದ ನಂತರ ಮಂಗಳೂರು ನಗರ ಹೊರವಲಯದ ಸುರತ್ಕಲ್ (Surathkal) ಸುತ್ತಮುತ್ತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿವೆ. ಮಂಗಳೂರಿನ ಸುರತ್ಕಲ್ ಪೇಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ (Police Security) ಕೈಗೊಳ್ಳಲಾಗಿದ್ದು. ಸುರತ್ಕಲ್ ಜಂಕ್ಷನ್ನಲ್ಲಿ 3 ಕೆಎಸ್ಆರ್ಪಿ (KSRP) ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಸುರತ್ಕಲ್ ಪೇಟೆ-ಕಾಟಿಪಳ್ಳ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾತ್ರವಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಸುರತ್ಕಲ್, ಬಜ್ಪೆ, ಕಾವೂರು, ಪಣಂಬೂರಲ್ಲಿ ನಿಷೇಧಾಜ್ಞೆ ಜಾರಿ (144 Section) ಮಾಡಲಾಗಿದೆ.
ಕೊಲೆಯಾದ ಜಲೀಲ್ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಅದರಂತೆ ಪೊಲೀಸರು ಜಲೀಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಮೃತದೇಹವನ್ನು ಸುರತ್ಕಲ್ ಮೂಲಕ ಬಿಗಿ ಪೊಲೀಸ್ ಭದ್ರತೆ ಮೂಲಕ ಕಾಟಿಪಳ್ಳಕ್ಕೆ ರವಾನಿಸಲಾಗಿದ್ದು, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಸುರತ್ಕಲ್ನಿಂದ ಕಾಟಿಪಳ್ಳಕ್ಕೆ ಯಾವುದೇ ಅನ್ಯ ವಾಹನಗಳು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣ: ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಯು.ಟಿ.ಖಾದರ್ ಆಕ್ರೋಶ
ಮಂಗಳೂರು (Mangalore) ಹೊರವಲಯದ ಸುರತ್ಕಲ್ನ (Surathkal) ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ಜಲೀಲ್ (45) ಎಂಬುವರಿಗೆ ದುಷ್ಕರ್ಮಿಗಳು ಇಂದು (ಡಿ. 24) ಚಾಕು ಇರಿದಿದ್ದಾರೆ. ಜಲೀಲ್ ಕಾಟಿಪಳ್ಳದ ನೈತಂಗಡಿ ರಸ್ತೆಯಲ್ಲಿರುವ ಲತೀಫಾ ಸ್ಟೋರ್ ಮಾಲಿಕರಾಗಿದ್ದರು. ಸ್ಟೋರ್ನಲ್ಲಿದ್ದ ಜಲೀಲ್ಗೆ ದುಷ್ಕರ್ಮಿಗಳ ಗುಂಪು ಚಾಕು ಇರಿದು ಪರಾರಿಯಾಗಿದ್ದರು. ಇದರಿಂದ ತೀರ್ವ ಗಯಗೊಂಡಿದ್ದ ಜಲೀಲ್ರನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್ ಸಾವನ್ನಪ್ಪಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 am, Sun, 25 December 22