ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣ: ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಯು.ಟಿ.ಖಾದರ್ ಆಕ್ರೋಶ
ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ ನೈತಿಕ ಪೊಲೀಸ್ಗಿರಿ, ಅನೈತಿಕ ದಾಳಿ ನಡೆಯುತ್ತಿದೆ.
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ನ (Surathkal) ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ನಿನ್ನೆ(ಡಿ.24) ಅಬ್ದುಲ್ ಜಲೀಲ್(45) ಎಂಬುವವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಈ ಘಟನೆ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರಿಂದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ. CLP ನಾಯಕ ಸಿದ್ದರಾಮಯ್ಯ ಘಟನೆ ಬಗ್ಗೆ ಮಾಹಿತಿ ಪಡೆಯಲು ಮಾಜಿ ಶಾಸಕ ಮೊಯ್ದೀನ್ಗೆ ಕರೆ ಮಾಡಿದ್ದ ಕಮಿಷನರ್ ಅಲ್ಲೇ ಇದ್ದಿದ್ರಿಂದ ಮೊಬೈಲ್ ಕೊಡಲು ಹೇಳಿದ್ರು. ಆಗ ಮೊಯ್ದೀನ್ ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ಮೊಬೈಲ್ ನೀಡಿದ್ದು ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ.
ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಖಾದರ್ ಆಕ್ರೋಶ
ಇನ್ನು ಘಟನೆ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ ನೈತಿಕ ಪೊಲೀಸ್ಗಿರಿ, ಅನೈತಿಕ ದಾಳಿ ನಡೆಯುತ್ತಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ರೋಶ ಹೊರ ಹಾಕಿದ್ದಾರೆ. ಬೇಲೆಬಲ್ ಸೆಕ್ಷನ್ ಹಾಕುವುದರಿಂದ ಬೇಲ್ ಪಡೆದು ಹೊರಬರುತ್ತಾರೆ. ಹೀಗಾಗಿ ಪದೇಪದೆ ಅಂತಹ ಘಟನೆಗಳು ನಡೆಯುತ್ತಿವೆ. ಗೃಹಸಚಿವರ ಜತೆ ನಿನ್ನೆ ಇದೇ ವಿಚಾರದ ಬಗ್ಗೆ ನಾನು ಚರ್ಚೆ ಮಾಡಿದ್ದೆ ಎಂದರು.
ಇದನ್ನೂ ಓದಿ: Mangaluru: ಸುರತ್ಕಲ್ನ ಕಾಟಿಪಳ್ಯದಲ್ಲಿ ಚಾಕು ಇರಿತ
ಗೃಹಸಚಿವರು ಜಿಲ್ಲೆಯಲ್ಲಿ ಇದ್ದಾಗಲೇ ಇಂತಹ ಕೃತ್ಯವೆಸಗಿದ್ದಾರೆ
ಇನ್ನು ಘಟನೆ ಸಂಬಂಧ ಮಾಜಿ ಶಾಸಕ ಮೊಯ್ದೀನ್ ಬಾವಾ ಪ್ರತಿಕ್ರಿಯೆ ನೀಡಿದ್ದಾರೆ. ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ತಕ್ಕ ಶಿಕ್ಷೆ ಆಗದಿರುವುದರಿಂದ ಮಂಗಳೂರಿನಲ್ಲಿ ಪದೇಪದೆ ಇಂತಹ ಘಟನೆ ಮರುಕಳಿಸುತ್ತಿವೆ. ಗೃಹಸಚಿವರು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇದ್ದಾರೆ. ಗೃಹಸಚಿವರು ಜಿಲ್ಲೆಯಲ್ಲಿ ಇದ್ದಾಗಲೇ ಇಂತಹ ಕೃತ್ಯವೆಸಗಿದ್ದಾರೆ. ಈ ಹಿಂದೆ ಸಿಎಂ ಜಿಲ್ಲೆಯಲ್ಲಿ ಇದ್ದಾಗ ಸುರತ್ಕಲ್ನಲ್ಲಿ ಹತ್ಯೆಯಾಗಿತ್ತು. ಇವರ ಕುಮ್ಮಕ್ಕಿನಿಂದಲೇ ಮಂಗಳೂರಿನಲ್ಲಿ ಹೀಗೆ ನಡೆಯುತ್ತಿದೆ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಬಳಿ ಮೊಯ್ದೀನ್ ಬಾವಾ ಪ್ರತಿಕ್ರಿಯಿಸಿದರು.
ಕ್ರಿಸ್ಮಸ್ ಇರುವ ಕಾರಣ ಅಗತ್ಯವಿದ್ದರೆ ನಿಷೇಧಾಜ್ಞೆ ಜಾರಿಮಾಡುತ್ತೇವೆ
ಘಟನೆ ಸಂಬಂಧ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿದ್ದು, ಹತ್ಯೆಯಾದ ಅಬ್ದುಲ್ ಜಲೀಲ್ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು. ಅಬ್ದುಲ್ ಜಲೀಲ್ಗೆ ಇಬ್ಬರು ಚೂರಿ ಇರಿದು ಪರಾರಿಯಾಗಿದ್ದಾರೆ. ಜಲೀಲ್ ಹತ್ಯೆ ಹಿಂದಿನ ಉದ್ದೇಶ ಏನು ಅನ್ನೋದು ಸ್ಪಷ್ಟವಾಗಿಲ್ಲ. ಸ್ಥಳೀಯರು ಕೆಲವು ಅನುಮಾನ ವ್ಯಕ್ತಪಡಿಸಿದ್ದು ಪರಿಶೀಲಿಸುತ್ತೇವೆ. ಘಟನೆ ನಡೆದಿರುವ ಸ್ಥಳ ಹಿಂದಿನಿಂದಲೂ ಅತ್ಯಂತ ಸೂಕ್ಷ್ಮ ಪ್ರದೇಶ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಕ್ರಿಸ್ಮಸ್ ಇರುವ ಕಾರಣ ಅಗತ್ಯವಿದ್ದರೆ ನಿಷೇಧಾಜ್ಞೆ ಜಾರಿಮಾಡುತ್ತೇವೆ. ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸುತ್ತೇವೆ. ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಡಿಸೆಂಬರ್ ತಿಂಗಳಲ್ಲಿ ಹಲವು ಗೂಂಡಾಗಿರಿ ಪ್ರಕರಣಗಳು ನಡೆದಿವೆ. ಎಲ್ಲಾ ಘಟನೆ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗುವುದು. ಕಳೆದ 1 ವಾರದಿಂದ ಇಂತಹ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಕೃತ್ಯ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:11 am, Sun, 25 December 22