ಖಾಸಗಿ ಆಸ್ಪತ್ರೆ ಕೈಚೆಲ್ಲಿದ್ದ ಜೀವಕ್ಕೆ ಮರುಜೀವ: ಸಾವಿನ ದವಡೆಯಿಂದ ಗರ್ಭಿಣಿಯನ್ನು ಪಾರು ಮಾಡಿದ ಮಂಗಳೂರಿನ ಸರ್ಕಾರಿ ವೈದ್ಯರು
ಮಂಗಳೂರಿನ ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆ, ಸಂಕೀರ್ಣ ಪ್ಲಾಸೆಂಟಾ ಪ್ರಿವಿಯಾ ಪ್ರಕರಣದಲ್ಲಿ 33 ವಾರಗಳ ಗರ್ಭಿಣಿ ಹಾಗೂ ಅವಧಿಪೂರ್ವ ಮಗುವನ್ನು ಯಶಸ್ವಿಯಾಗಿ ರಕ್ಷಿಸಿದೆ. ಖಾಸಗಿ ಆಸ್ಪತ್ರೆಗಳು ಕೈಚೆಲ್ಲಿದ್ದಾಗ, ಬಹು-ವೈದ್ಯಕೀಯ ತಂಡದ ಸತತ 4 ಗಂಟೆಗಳ ಶಸ್ತ್ರಚಿಕಿತ್ಸೆ ತಾಯಿ-ಮಗುವಿಗೆ ನವಜೀವ ನೀಡಿದೆ. ಆಸ್ಪತ್ರೆಯ ಸಾಮಾಜಿಕ ಕಳಕಳಿ, ಮಹಿಳಾ ಕೇಂದ್ರಿತ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು, ಸೆ.28: ಸಾಮಾಜಿಕ ಕಳಕಳಿ ಹಾಗೂ ಮಹಿಳಾ ಕೇಂದ್ರಿತ ವೈದ್ಯಕೀಯ ಸೇವೆಗೆ ಹೆಸರುವಾಸಿಯಾದ ಮಂಗಳೂರಿನ ಸರ್ಕಾರಿ ಲೇಡಿ ಗೋಷನ್ ಆಸ್ಪತ್ರೆ (Government Lady Goschen Hospital) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಕಠಿಣ ಹಾಗೂ ಸಂಕೀರ್ಣ ಸ್ಥಿತಿಯಲ್ಲಿದ್ದ 33 ವಾರಗಳ ಗರ್ಭಿಣಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಖಾಸಗಿ ಆಸ್ಪತ್ರೆ ಕೈಚೆಲ್ಲಿದ್ದ ತಾಯಿ ಹಾಗೂ ಅವಧಿಪೂರ್ವ ಮಗುವಿನ ಪ್ರಾಣ ಉಳಿಸಿ ಹೊಸ ಜೀವ ನೀಡಿರುವ ಬಗ್ಗೆ ದೈಜಿವರ್ಲ್ಡ್ ವರದಿಯನ್ನು ಮಾಡಿದೆ.
ಅಷ್ಟಕ್ಕೂ ಆಗಿದ್ದೇನು?:
ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದಕ್ಕೆ 33 ವಾರಗಳ (ಸುಮಾರು 8 ತಿಂಗಳು) ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ದಾಖಲಾಗಿದ್ದರು. ಸ್ಕ್ಯಾನಿಂಗ್ ನಡೆಸಿದಾಗ ಗರ್ಭಕೋಶದ ದ್ವಾರದಲ್ಲೇ ಜರಾಯು (Placenta) ಅಡ್ಡಲಾಗಿ ಬೆಳೆದು ಅತ್ಯಂತ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದು ಬೆಳಕಿಗೆ ಬಂದಿತ್ತು. ಈ ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವಾಗ ಮೂತ್ರಕೋಶ, ಸಣ್ಣ ಕರಳು ಹಾಗೂ ದೊಡ್ಡ ಕರಳಿಗೆ ತೀವ್ರ ಹಾನಿಯಾಗುವ ಅಪಾಯವಿರುತ್ತದೆ. ಇಂತಹ ಸ್ಥಿತಿಯಲ್ಲಿ ಗರ್ಭಕೋಶವನ್ನೇ ತೆಗೆದುಹಾಕುವುದು ಅನಿವಾರ್ಯವಾಗುತ್ತದೆ.
ಶಸ್ತ್ರಚಿಕಿತ್ಸೆಯ ವೇಳೆ 3 ರಿಂದ 4 ಲೀಟರ್‌ಗಳಷ್ಟು ಅಪಾರ ಪ್ರಮಾಣದ ರಕ್ತಸ್ರಾವವಾಗಿ ಗರ್ಭಿಣಿಯ ಜೀವಕ್ಕೇ ಕಂಟಕ ಎದುರಾಗುವ ಸಂಭವ ಅಧಿಕವಾಗಿರುತ್ತದೆ. ತಾಯಂದಿರ ಮರಣಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸ್ಥಿತಿ ಕೈಮೀರಿದ್ದನ್ನು ಕಂಡು ಖಾಸಗಿ ಆಸ್ಪತ್ರೆ ಭರವಸೆ ಕಳೆದುಕೊಂಡಾಗ, ಗರ್ಭಿಣಿಯನ್ನು ತಕ್ಷಣವೇ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಗೆ ರವಾನಿಸಲಾಯಿತು.
ಸತತ 4 ಗಂಟೆಗಳ ಶಸ್ತ್ರಚಿಕಿತ್ಸೆ:
ಲೇಡಿ ಗೋಷನ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ಪರಿಕಲ್ಪನೆಯಂತೆ, ಕಳೆದ ಒಂದೂವರೆ ವರ್ಷಗಳಿಂದ ಜಾರಿಯಲ್ಲಿರುವ ವಿಶೇಷ ವೈದ್ಯಕೀಯ ಕಾರ್ಯವಿಧಾನದಡಿ ಶಸ್ತ್ರಚಿಕಿತ್ಸೆಗೆ ತಕ್ಷಣವೇ ಚಾಲನೆ ನೀಡಲಾಯಿತು. ಗರ್ಭಿಣಿಯ ದೇಹದಿಂದ ರಕ್ತದ ಪ್ರತಿ ಹನಿಯನ್ನೂ ಉಳಿಸುವ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡವನ್ನು ಮೊದಲೇ ಆಪರೇಷನ್ ಥಿಯೇಟರ್‌ಗೆ ಕರೆಸಿಕೊಳ್ಳಲಾಯಿತು. ಕೆಎಂಸಿ ಸ್ತ್ರೀರೋಗ ವಿಭಾಗದ ಪ್ರೊ. ಡಾ. ನಿಖಿಲ್ ಶೆಟ್ಟಿ ಮುಖ್ಯ ಶಸ್ತ್ರಚಿಕಿತ್ಸಕರಾಗಿ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ವಿ ಹೆರಿಗೆ ಮಾಡಿಸಿದರು.
ಹಿರಿಯ ರೆಸಿಡೆಂಟ್ ಡಾ. ಸುಷಮ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಗಗನ್ ದೀಪ್ ಕೌರ್, ಡಾ. ಪೃಥ್ವಿ ಶೆಣೈ ಹಾಗೂ ಜೂನಿಯರ್ ರೆಸಿಡೆಂಟ್ ಡಾ. ತನ್ವಿತಾ ಶಸ್ತ್ರಚಿಕಿತ್ಸೆಯಲ್ಲಿ ನೆರವಾದರು. ಹಾನಿಗೊಳಗಾಗಿದ್ದ ಮೂತ್ರಕೋಶಕ್ಕೆ ಕೆಎಂಸಿಯ ಡಾ. ಪ್ರಮೋದ್, ಡಾ. ಮೀತ್ ಹಾಗೂ ಡಾ. ಶಿವಾನಂದ್ ಅವರನ್ನೊಳಗೊಂಡ ತಂಡ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಜೀವನ ನೀಡಿದರು. ಕೆಎಂಸಿ ಅನರಿವೇಷನ್ (ಅರಿವಳಿಕೆ) ತಜ್ಞೆ ಡಾ. ಶಿಲ್ಪಾ ಶಸ್ತ್ರಚಿಕಿತ್ಸೆಯುದ್ದಕ್ಕೂ ರೋಗಿಯ ಜೀವಲಕ್ಷಣಗಳನ್ನು ತೀವ್ರವಾಗಿ ನಿಗಾವಹಿಸಿದರು. ನರ್ಸ್ ದೀಪಾ ಕೂಡ ಈ ಕಾರ್ಯದಲ್ಲಿ ಸಹಾಯ ಮಾಡಿದರು.
ಇದನ್ನೂ ಓದಿ: 30 ಕೋಟಿ ರೂ. ಜಾಕ್‌ಪಾಟ್ ಗೆದ್ದ ಅದೃಷ್ಟಶಾಲಿ ಯಾರು ಗೊತ್ತಾ?: ಕೇರಳ ‘ತಿರುವೋಣಂ ಬಂಪರ್’ ಲಾಟರಿ ಫಲಿತಾಂಶ ಪ್ರಕಟ
ಅವಧಿಪೂರ್ವ ನವಜಾತ ಶಿಶುವಿಗೂ ತುರ್ತು ಆರೈಕೆ:
ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾದ 33 ವಾರಗಳ ಅವಧಿಪೂರ್ವ ಮಗುವನ್ನು ಎನ್‌ಐಸಿಯು ನವಜಾತ ಶಿಶು ನಿಗಾ ವಿಭಾಗಕ್ಕೆ ರವಾನಿಸುವ ಮುನ್ನ, ಮಕ್ಕಳ ತಜ್ಞೆ ಡಾ. ಆರುಷಿ ಅಗತ್ಯ ತುರ್ತು ವೈದ್ಯಕೀಯ ಆರೈಕೆ ನೀಡಿ ಮಗುವಿನ ಸ್ಥಿತಿ ಸ್ಥಿರವಾಗಿರುವಂತೆ ನೋಡಿಕೊಂಡರು. ಸರ್ಕಾರಿ ಆಸ್ಪತ್ರೆಯ ವೈದ್ಯರ ಸಕಾಲಿಕ ಸ್ಪಂದನೆ, ಸುಧಾರಿತ ತಂತ್ರಜ್ಞಾನ ಹಾಗೂ ಸೂಪರ್ ಸ್ಪೆಷಾಲಿಸ್ಟ್ ವೈದ್ಯರ ಒಗ್ಗಟ್ಟಿನ ಶ್ರಮದಿಂದ ತಾಯಿ-ಮಗು ಇಬ್ಬರೂ ಸಾವಿನ ದವಡೆಯಿಂದ ಪಾರಾಗಿದ್ದು, ಸಾರ್ವಜನಿಕ ವಲಯದಲ್ಲಿ ಲೇಡಿ ಗೋಷನ್ ಆಸ್ಪತ್ರೆಯ ಸೇವಾನಿಷ್ಠೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




