ಮಂಗಳೂರಿನಲ್ಲಿ ನೂರಾರು ಮಂದಿಗೆ ಫುಡ್ ಪಾಯಿಸನ್​: ನೀರು ಕುಡಿಯುವಾಗ ಇರಲಿ ಎಚ್ಚರ

|

Updated on: Apr 05, 2024 | 8:28 AM

ಬೆಂಗಳೂರು ನಗರದಲ್ಲಿ ನೀರಿನ ಬಿಕ್ಕಟ್ಟಿನ ನಡುವೆಯೇ ಕಾಲರಾ ಪ್ರಕರಣಗಳು ಹೆಚ್ಚಾಗತೊಡಗಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಮತ್ತು ಇತರ ಪ್ರದೇಶಗಳಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ವಿಷಾಹಾರ ಅಥವಾ ಫುಡ್ ಪಾಯಿಸನ್ ಪ್ರಕರಣಗಳು ಹೆಚ್ಚಾಗತೊಡಗಿವೆ. ಫುಡ್ ಪಾಯಿಸನ್ ಎಂದರೇನು? ಇದನ್ನು ತಡೆಯಲು ಏನು ಮಾಡಬೇಕು? ಮನೆ ಮದ್ದುಗಳೇನು ಇತ್ಯಾದಿ ಮಾಹಿತಿ ಇಲ್ಲಿದೆ.

ಮಂಗಳೂರಿನಲ್ಲಿ ನೂರಾರು ಮಂದಿಗೆ ಫುಡ್ ಪಾಯಿಸನ್​: ನೀರು ಕುಡಿಯುವಾಗ ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಏಪ್ರಿಲ್ 5: ಹೆಚ್ಚುತ್ತಿರುವ ಬಿಸಿಲಿನ ತಾಪ, ನೀರಿನ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದಾಗಿ ಮಂಗಳೂರಿನ (Mangaluru) ಮತ್ತು ಕರಾವಳಿ ಭಾಗದ ಇತರ ಬಹುತೇಕ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಫುಡ್​ ಪಾಯಿಸನ್​ನ (Food poisoning) ಹಲವು ಪ್ರಕರಣಗಳು ದೃಢಪಡುತ್ತಿವೆ. ದಿನಕ್ಕೆ ಐದಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಆರೋಗ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಫುಡ್​ ಪಾಯಿಸನ್ ಅಥವಾ ವಿಷಾಹಾರ ಸಮಸ್ಯೆಯಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವಿವಿಧ ಕಾರಣಗಳಿಂದ ನಾವು ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದರೂ ಕಲುಷಿತ ನೀರು ಮುಖ್ಯ ಕಾರಣ ಎಂದು ಆಯುರ್ ಸ್ಪರ್ಶ ಆಸ್ಪತ್ರೆಯ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಸೌಜನ್ಯ ಸತೀಶ್ ಶಂಕರ್ ವಿವರಿಸಿದ್ದಾರೆ. ತಾಪಮಾನ ಪ್ರಮಾಣ ಹೆಚ್ಚುತ್ತಿರುವಾಗ ಹೆಚ್ಚು ನೀರನ್ನು ಸೇವಿಸುವುದು ಅತ್ಯಗತ್ಯ. ಆದರೆ ಅದರ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ವಿಷಾಹಾರ ಅಥವಾ ಫುಡ್​ ಪಾಯಿಸನ್​ಗೆ ಕಾರಣವೇನು?

ಕಲುಷಿತ ನೀರು ಸೇವನೆ ಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ, ಆಹಾರದಲ್ಲಿರುವ ಕಲ್ಮಶಗಳು, ಆಹಾರದಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು, ಅವಧಿ ಮೀರಿದ ಅಥವಾ ಬೇಯಿಸದ ಆಹಾರದ ಬಳಕೆ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ದೀರ್ಘಾವಧಿಯ ಆಹಾರ ಸಂಗ್ರಹಣೆ, ಹಾಳಾದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆಯೂ ವಿಷಾಹಾರಕ್ಕೆ ಕಾರಣವಾಗತ್ತವೆ. ಮನೆಯಲ್ಲಿ ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸುವ ಮೊದಲು ಸಂಪೂರ್ಣವಾಗಿ ತೊಳೆಯಬೇಕು.

ಫುಡ್​ ಪಾಯಿಸನ್ ಲಕ್ಷಣಗಳೇನು?

ಜ್ವರ, ವಾಂತಿ, ಅತಿಸಾರ, ತಲೆನೋವು ಮತ್ತು ಹೊಟ್ಟೆ ನೋವು, ಕೆಲವೊಮ್ಮೆ ಚರ್ಮದ ದದ್ದುಗಳು ಮತ್ತು ತುರಿಕೆಗಳು ಫುಡ್​ ಪಾಯಿಸನ್​ನ ಪ್ರಮುಖ ಲಕ್ಷಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯ.

ಇದನ್ನೂ ಓದಿ: ಎಚ್ಚರ, ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕಾಲರಾ: ಸೋಂಕು ತಡೆಯಲು ಏನು ಮಾಡಬೇಕು? ಇಲ್ಲಿದೆ ಸಲಹೆ

ಕೆಲವು ಮನೆಮದ್ದುಗಳು ಫುಡ್​ ಪಾಯಿಸನ್ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದಾದರೂ, ಯಾವುದೇ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಜೀರಿಗೆಯನ್ನು ಜಗಿಯುವುದು ಅಥವಾ ಜೀರಿಗೆ ಪುಡಿಯನ್ನು ಸೇವಿಸುವುದರಿಂದ ರೋಗಲಕ್ಷಣಗಳನ್ನು ನಿವಾರಿಸಲು ಪ್ರಯೋಜನವಾಗಬಹುದು. ಜೇನುತುಪ್ಪವು ಆ್ಯಂಟಿಫಂಗಲ್ ಏಜೆಂಟ್ ಆಗಿರುವುದರಿಂದ ವಿಷಾಹಾರದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ