ದಕ್ಷಿಣ ಕನ್ನಡ, ಏ.06: ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ್ದ ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಮಹಿಳೆಯ ಪತಿಯ ಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರು(Mangaluru)ಹೊರವಲಯದ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಇಂದು(ಏ.06) ಮಧ್ಯಾಹ್ನದ ವೇಳೆ ನಡೆದಿದೆ. ಹಮೀದ್ ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳು ಹಮೀದ್ನನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಹಣದ ವಿಚಾರವಾಗಿ ಕೃತ್ಯ ನಡೆದಿರುವ ಬಗ್ಗೆ ಅನುಮಾನ ಮೂಡಿದ್ದು, ಮಂಗಳೂರಿನ ಖ್ಯಾತ ಈಜುಪಟು ಜಾವೇದ್ ಎಂಬಾತನಿಂದ ಕೃತ್ಯ ನಡೆದ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಕೊಲೆ ಯತ್ನ ಪ್ರಕರಣ ಆರೋಪಿ ಪ್ರೈವೇಟ್ ಜೆಟ್ ಮೂಲಕ ಎಸ್ಕೇಪ್, ಬೆಂಗಳೂರು ಪೊಲೀಸರು ಬರಿಗೈನಲ್ಲಿ ವಾಪಸ್
ಪಂಜಿಮೊಗರಿನಲ್ಲಿ 2011ರ ಜೂ.28ರಂದು ಮಧ್ಯಾಹ್ನ ಚೂರಿಯಿಂದ ತಿವಿದು ತಾಯಿ ರಜಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ, ಈ ಘಟನೆ ನಡೆದು 13 ವರ್ಷ ಕಳೆದರೂ ಹತ್ಯೆ ಆರೋಪಿಗಳು ಪತ್ತೆಯಾಗಿಲ್ಲ. ಈ ಕುರಿತು ಸ್ಥಳೀಯ ಪೊಲೀಸರ ಜೊತೆ ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ.
ಮೃತ ರಜಿಯಾಳ ಪತಿ, ಸದ್ಯ ಕೊಲೆ ಯತ್ನಕ್ಕೆ ಒಳಗಾದ ಹಮೀದ್ ಪಿ.ಎಂ. ವಿರುದ್ದವೂ ಆರೋಪ ಕೇಳಿ ಬಂದಿತ್ತು. ಪತಿ ಹಮೀದ್ ಮನೆಯಿಂದ ಹೊರ ಹೋದ 30 ನಿಮಿಷದ ಬಳಿಕ ಹತ್ಯೆಯಾಗಿತ್ತು. ಆದರೆ, ಸ್ಥಳೀಯ ಪೊಲೀಸರು ಹಾಗೂ ಸಿಐಡಿ ತನಿಖೆ ವೇಳೆ ಹಮೀದ್ ಕೈವಾಡ ಇಲ್ಲ ಎಂದಾಗಿತ್ತು. ಅಲ್ಲದೇ ಪತಿ ಹಮೀದ್ ಮಂಪರು ಪರೀಕ್ಷೆಗೂ ಆಗ್ರಹಿಸಿದ್ದರು. ಇದೀಗ ಉಳ್ಳಾಲದಲ್ಲಿ ಹಮೀದ್ಗೆ ಚೂರಿ ಇರಿದು ಹತ್ಯೆಗೆ ಯತ್ನಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sat, 6 April 24