ಸೋಷಿಯಲ್ ಮೀಡಿಯಾ ಕಿಡಿಗೇಡಿಗಳಿಗೆ ಪೊಲೀಸರ ಖೆಡ್ಡಾ: ವಿದೇಶದಲ್ಲಿ ಕೂತು ಪ್ರಚೋದನಾಕಾರಿ ಪೋಸ್ಟ್ ಮಾಡಿದವರೂ ಅಂದರ್

ಸಾಮಾಜಿಕ ಮಾಧ್ಯಮಗಳ ಮೂಲಕ ಶಾಂತಿ ಕದಡಲು ಯತ್ನಿಸುವವರನ್ನು ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ವಿದೇಶದಲ್ಲಿ ಕೂತು ಪೋಸ್ಟ್ ಹಾಕಿದರೆ ಏನೂ ಆಗಲ್ಲ ಎಂದುಕೊಂಡವರಿಗೂ ಮಂಗಳೂರು ಪೊಲೀಸರು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ. ತಲ್ವಾರ್ ಹಿಡಿದು ರೀಲ್ಸ್ ಮಾಡಿ ಭಯ ಹುಟ್ಟಿಸಿದ ಇಬ್ಬರನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಸೋಷಿಯಲ್ ಮೀಡಿಯಾ ಕಿಡಿಗೇಡಿಗಳಿಗೆ ಪೊಲೀಸರ ಖೆಡ್ಡಾ: ವಿದೇಶದಲ್ಲಿ ಕೂತು ಪ್ರಚೋದನಾಕಾರಿ ಪೋಸ್ಟ್ ಮಾಡಿದವರೂ ಅಂದರ್
ಸೌದಿ ಅರೇಬಿಯಾದಿಂದ ಕಿಡಿಗೇಡಿ ಮಾಡಿದ್ದ ಪೋಸ್ಟ್
Edited By:

Updated on: Dec 18, 2025 | 7:38 AM

ಮಂಗಳೂರು, ಡಿಸೆಂಬರ್ 18: ‘ನಾಯಕ್ ನಹೀ ಕಲ್ ನಾಯಕ್ ಹೇ’ ಎಂಬ ಹಿಂದಿ ಹಾಡಿಗೆ ತಲ್ವಾರ್ ಹಿಡಿದುಕೊಂಡು ಡ್ಯಾನ್ಸ್, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಬಿಲ್ಡಪ್. ಇದಾದ ಬೆನ್ನಲ್ಲೇ ಜೈಲುಕಂಬಿ ಎಣಿಸಿ ಕ್ಷಮೆ ಕೇಳುತ್ತಿರುವ ಅಸಾಮಿ. ಇದು ತಲ್ವಾರ್ ಹಿಡಿದು ರೀಲ್ಸ್ ಮಾಡಿ ಭಯ ಹುಟ್ಟಿಸಿದ ಇಬ್ಬರು ಕಂಬಿ ಹಿಂದೆ ಹೋದ ಕಥೆ. ಇಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮಂಗಳೂರಿನ ಬಂದರು ನಿವಾಸಿ ಅಮೀರ್ ಸುಹೇಲ್. ಇದನ್ನು ಸುರೇಶ್ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ‘psy’ ಎಂದು ಹಾರ್ಟ್ ಸಿಂಬಲ್ ಹಾಕಿ ಪೋಸ್ಟ್ ಮಾಡಿದ್ದ. ಸಾಮಾಜಿಕ ಮಾಧ್ಯಮದಲ್ಲಿ ಇವರ ಈ ಮಚ್ಚು-ಲಾಂಗಿನ ಶೋಕಿ ಕಂಡು ಜನ ಆತಂಕಗೊಂಡಿದ್ದರು. ಈ ರೀಲ್ಸ್ ಕಣ್ಣಿಗೆ ಬಿದ್ದಿದ್ದೇ ತಡ, ಕಾವೂರು ಪೊಲೀಸರು ಇವರ ಮನೆಗೆ ನುಗ್ಗಿ ತಲ್ವಾರ್ ಸಮೇತ ಇಬ್ಬರನ್ನೂ ಎತ್ತಿಕೊಂಡು ಬಂದಿದ್ದಾರೆ. ಈಗ ಬಿಲ್ಡಪ್ ಕೊಟ್ಟಿದ್ದ ಸುರೇಶ್‌ ಮತ್ತು ಅಮೀರ್‌ ಇಬ್ಬರೂ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಕೇವಲ ಈ ಅಸಾಮಿಗಳು ಮಾತ್ರವಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವ ಇಂತಹ ಕಿಡಿಗೇಡಿಗಳ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ಸಮರವನ್ನೇ ಸಾರಿದೆ. ಎಲ್ಲೋ ಸೌದಿ ಅರೇಬಿಯಾದಲ್ಲೋ, ಬೇರೆ ಯಾವುದೇ ದೇಶದಲ್ಲಿಯೋ ಕೂತು ನಕಲಿ ಖಾತೆ ಕ್ರಿಯೇಟ್ ಮಾಡಿ ಧರ್ಮದ ವಿರುದ್ಧ ವಿಷಕಾರಿದರೆ ನಮ್ಮನ್ನು ಹಿಡಿಯೋರು ಯಾರು? ನಮ್ಮ ಕೈಗೆ ಬೇಡಿ ತೊಡಿಸೋರು ಯಾರು? ಎಂಬ ಭಾವನೆ ಕೆಲವು ಕಿಡಿಗೇಡಿಗಳಲ್ಲಿತ್ತು. ಆದರೆ, ಮಂಗಳೂರು ಪೊಲೀಸರು ಮಾತ್ರ, ‘ನೀನು ಸೌದಿ ಅರೇಬಿಯಾದಲ್ಲೇ ಇರು ಎಲ್ಲೇ ಇರು, ಒಮ್ಮೆ ಇಂಡಿಯಾಗೆ ಕಾಲಿಟ್ಟರೆ ಕಂಬಿ ಎಣಿಸೋದು ಗ್ಯಾರಂಟಿ’ ಎಂಬ ಸಂದೇಶ ರವಾನಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿದ್ದುಕೊಂಡು ಪೋಸ್ಟ್ ಮಾಡಿದ್ದವನೂ ಅರೆಸ್ಟ್!

ಸೌದಿ ಅರೇಬಿಯಾದಲ್ಲಿ ಕೂತುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ‘_sdpi_2025’ ಎಂಬ ನಕಲಿ ಖಾತೆ ಕ್ರಿಯೇಟ್ ಮಾಡಿ, ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ಉಳಾಯಿಬೆಟ್ಟು ನಿವಾಸಿ ಅಬ್ದುಲ್ ಖಾದರ್ ನಿಹಾದ್‌ಗೆ ಪೊಲೀಸರು ಸರಿಯಾದ ಶಾಕ್ ನೀಡಿದ್ದಾರೆ. ಅಕ್ಟೋಬರ್‌ನಲ್ಲೇ ಕೇಸ್ ದಾಖಲಿಸಿದ್ದ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಈತ ಕೇರಳದ ಕ್ಯಾಲಿಕಟ್ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆಯೇ, ಮಾಹಿತಿ ಪಡೆದ ಮಂಗಳೂರು ಪೊಲೀಸರು ಅಲ್ಲೇ ಆತನನ್ನ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

ಸಾಮಾಜಿ ಮಾಧ್ಯಮದಲ್ಲಿ ಪ್ರಚೋದನಾಕಾರಿ ಸಂದೇಶ: 25 ಮಂದಿಯ ಬಂಧನ

ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಸಂದೇಶ ಹಾಕಿದ ಸುಮಾರು 16 ಖಾತೆಗಳ ವಿರುದ್ದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಳೆದ ಆರು ತಿಂಗಳಿನಲ್ಲಿ 25 ಮಂದಿ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಏಳು ಜನ ವಿದೇಶದಲ್ಲಿ ಇದ್ದುಕೊಂಡು ಪೋಸ್ಟ್ ಹಾಕಿದವರಾಗಿದ್ದು, ಈ ಮೂಲಕ ಸೌಹಾರ್ದತೆ ಕೆಡಿಸಲು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಶೋಕಿ ಮಾಡಿದರೆ ಸುಮ್ಮನಿರಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಕೋಮುಸೂಕ್ಷ್ಮ ಮಂಗಳೂರಿನಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ

ಒಟ್ಟಿನಲ್ಲಿ, ವಿದೇಶದಲ್ಲಿದ್ದೇವೆ, ನಮ್ಮನ್ನು ಯಾರೂ ಹಿಡಿಯಲ್ಲ ಅಥವಾ ರೀಲ್ಸ್ ಅಲ್ವಾ ನಮಗೇನು ಆಗಲ್ಲ ಅಂದುಕೊಂಡಿದ್ದವರಿಗೆ ಖಾಕಿ ಪಡೆಯ ಈ ಕಾರ್ಯಾಚರಣೆ ಚಳಿ ಬಿಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ