ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!

| Updated By: ಗಂಗಾಧರ​ ಬ. ಸಾಬೋಜಿ

Updated on: Jan 16, 2025 | 10:27 PM

ಮಂಗಳೂರಿನ ಸುರತ್ಕಲ್‌ನಲ್ಲಿರುವ ಟ್ಯಾಂಕರ್ ಯಾರ್ಡ್‌ನಲ್ಲಿ ಭಾರೀ ಪ್ರಮಾಣದ ಡೀಸೆಲ್ ಕಳ್ಳತನ ನಡೆದಿದ್ದು, 1685 ಲೀಟರ್ ಡೀಸೆಲ್ ಜಪ್ತಿಯಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಡಿಮೆ ತಾಪಮಾನದಲ್ಲಿ ಡೀಸೆಲ್‌ನ ಪ್ರಮಾಣ ಕಡಿಮೆ ಕಾಣುವುದನ್ನು ಬಳಸಿಕೊಂಡು ಟ್ಯಾಂಕರ್ ಚಾಲಕರು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ಅಕ್ರಮದಲ್ಲಿ ಟ್ಯಾಂಕರ್ ಮಾಲೀಕರ ಪಾತ್ರವೂ ಇರುವ ಸಾಧ್ಯತೆಯಿದೆ.

ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!
ಕಡಲನಗರಿ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಡೀಸೆಲ್​ ಕಳವು ದಂಧೆ!
Follow us on

ಮಂಗಳೂರು, ಜನವರಿ 16: ವಾಯು ಸಾರಿಗೆ, ಜಲ ಸಾರಿಗೆ ಹಾಗೂ ಭೂ ಸಾರಿಗೆ ಈ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕರ್ನಾಟಕದ ಏಕೈಕ ನಗರವೆಂದರೆ ಅದು ಕಡಲ ನಗರಿ ಮಂಗಳೂರು. ಹೀಗಾಗಿ ಇಲ್ಲಿಂದ ಸಾಕಷ್ಟು ಉತ್ಪನ್ನಗಳು ರಾಜ್ಯ, ಹೊರರಾಜ್ಯಗಳಿಗೆ ರಫ್ತಾಗುತ್ತದೆ. ಅದರಲ್ಲಿ ಡೀಸೆಲ್ (Diesel)​ ರಫ್ತು ಕೂಡ ಒಂದು. ಇಷ್ಟೇ ಆದರೆ ಏನು ಸಮಸ್ಯೆ ಇರಲಿಲ್ಲ. ಆದರೆ ಮಂಗಳೂರಿನ ಟ್ಯಾಂಕರ್ ಯಾರ್ಡ್​ ಒಂದರಲ್ಲಿ ಭಾರೀ ಅಕ್ರಮದ ವಾಸನೆ ಸುಳಿದಾಡಿದ್ದು, ಲಕ್ಷಗಟ್ಟಲೇ ಮೌಲ್ಯದ ಡೀಸೆಲ್​ ಕಳ್ಳತನವಾಗಿದೆ. ಈ ಕುರಿತ ಕಂಪ್ಲೀಟ್​ ವರದಿ ಇಲ್ಲಿದೆ.

ಡೀಸೆಲ್​ ಕಳ್ಳತನ

ಕಡಲನಗರಿ ಮಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಟ್ಯಾಂಕರ್​ಗಳ ಮೂಲಕ ಡೀಸೆಲ್ ರಫ್ತಾಗುತ್ತೆ ಅನ್ನೋದು ಬಹುತೇಕರಿಗೆ ತಿಳಿದಿರುವ ವಿಚಾರ. ಆದರೆ ಈಗ ಹೊಸ ಸುದ್ದಿ ಏನೆಂದರೆ ಮಂಗಳೂರು ತಾಲೂಕಿನ ಸುರತ್ಕಲ್​​ ಸಮೀಪದ ಬಾಳ ಗ್ರಾಮದ ಟ್ಯಾಂಕರ್​ ಯಾರ್ಡ್​ನಲ್ಲಿ ಡೀಸೆಲ್​ ಲೋಡ್​​ ಮಾಡುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಟ್ಯಾಂಕರ್​ ಚಾಲಕರು ಡೀಸೆಲ್​ ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಮಾಲೀಕರು ಸಾಥ್​ ನೀಡಿದ್ದಾರೆ ಎಂಬ ಗುಮಾನಿ ಎದ್ದಿದೆ.

ಇದನ್ನೂ ಓದಿ: ಹಿಂದೂ ಯುವಕನೊಂದಿಗೆ ಮದ್ವೆಯಾದ ಮುಸ್ಲಿಂ ಯುವತಿ: ನಾಪತ್ತೆಯಾಗಿದ್ದ ಜೋಡಿ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷ

ಮಂಗಳೂರಿನಿಂದ ಟ್ಯಾಂಕರ್​ಗಳಲ್ಲಿ ಡೀಸೆಲ್​ ಲೋಡ್​ ಮಾಡಿ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯ, ಹೊರರಾಜ್ಯಗಳಿಗೆ ಡೀಸೆಲ್​ ರಫ್ತು ಮಾಡಲಾಗುತ್ತದೆ. ಕಡಿಮೆ ತಾಪಮಾನದಲ್ಲಿ ಜಿಗುಟಾಗಿ ಇರುವ ಡೀಸೆಲ್​​ ಕಡಿಮೆ ಪ್ರಮಾಣದಲ್ಲಿರುವಂತೆ ಕಂಡರೆ ಹೆಚ್ಚು ತಾಪಮಾನಗಳಿರುವ ರಾಜ್ಯಗಳಿಗೆ ಹೋದಾಗ ಜಿಗುಟಾದ ಡೀಸೆಲ್​ ಕರಗಿ ದ್ರವವಾಗಿ ಮಾರ್ಪಾಡಾಗುವ ಕಾರಣ ಡೀಸೆಲ್​ ಪ್ರಮಾಣ ಹೆಚ್ಚಾದಂತೆ ತೋರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್​ ಚಾಲಕರು ಲೋಡಿಂಗ್ ಸಂದರ್ಭ ಕಡಿಮೆ ತಾಪಮಾನವಿರುವಾಗ ಟ್ಯಾಂಕರ್​ಗಳಿಂದ ಡೀಸೆಲ್​ ಕದ್ದು ಹೆಚ್ಚು ತಾಪಮಾನ ಹೊಂದಿರುವ ರಾಜ್ಯಗಳಲ್ಲಿರುವ ಫ್ಯಾಕ್ಟರಿಗಳಿಗೆ ರಫ್ತು ಮಾಡುವಾಗ ಪಂಗನಾಮ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.

ನಾಲ್ವರ ಬಂಧನ

ಸುರತ್ಕಲ್​ ಯಾರ್ಡ್​ನಲ್ಲಿಯೇ ಈ ಕಳ್ಳಾಟ ನಡೀತಾ ಇದ್ದು ಒಂದೊಂದು ಟ್ಯಾಂಕರ್​ಗಳಿಂದ ಖದೀಮರು ಏನಿಲ್ಲವೆಂದರೂ 40 ರಿಂದ 100 ಲೀಟರ್​ ಡೀಸೆಲ್​ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಬಿಸಿಲಿನ ತಾಪ ಏರಿದಂತೆ ಡೀಸೆಲ್ ಪ್ರಮಾಣ ಏರಿಕೆಯಾಗುವ ಕಾರಣ ಇವರ ಕಳ್ಳತನ ಫ್ಯಾಕ್ಟರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ, ಕಳ್ಳತನ ಮಾಡಿ ಡೀಸೆಲ್​ ಸಂಗ್ರಹಿಸಿಟ್ಟಿದ್ದ ಶೆಡ್​ ಮೇಲೆ ದಾಳಿ ಮಾಡಿದ್ದು, ನಾಲ್ವರು ಆರೋಪಿಗಳಾದ ಸಂತೋಷ್​, ಐರನ್​ ರಿತೇಶ್​ ಮಿನೇಜ್, ಟ್ಯಾಂಕರ್ ಚಾಲಕ ನಾರಾಯಣ, ಜಾಗದ ಮಾಲೀಕ ರವಿ ಎಂಬವರನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ದಾಳಿ ವೇಳೆ 1 ಲಕ್ಷದ 52 ಸಾವಿರ ರೂಪಾಯಿ ಮೌಲ್ಯದ 1,685 ಲೀಟರ್​ ಡೀಸೆಲ್​, 20 ಲೀಟರ್​​ ಪೆಟ್ರೋಲ್​, ಕೃತ್ಯಕ್ಕೆ ಬಳಸಿದ 4 ಮೊಬೈಲ್​ ಸೇರಿದಂತೆ ಒಟ್ಟು 2 ಲಕ್ಷದ 2 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ಸೀಜ್​ ಮಾಡಿದ್ದಾರೆ .

ಇದನ್ನೂ ಓದಿ: ಮಂಗಳೂರು: ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?

ಒಟ್ಟಿನಲ್ಲಿ ಮಂಗಳೂರಿನಲ್ಲಿನ ಫ್ಯೂಯಲ್ ಸರಬರಾಜು​ ಕಂಪನಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದವರ ಹೆಡೆಮುರಿ ಕಟ್ಟುವಲ್ಲಿ ಖಾಕಿ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಮಾಲೀಕರೂ ಶಾಮಿಲಾಗಿರುವ ಸಾಧ್ಯತೆ ಗೋಚರಿಸುತ್ತಿದ್ದು ತಪ್ಪಿತಸ್ಥರ ಎದೆಯಲ್ಲಿ ನಡುಕ ಹುಟ್ಟಿರುವುದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.