ಶಿರಾಡಿ ಘಾಟ್​​​ನಲ್ಲಿ ರೈಲು-ರೋಡ್ ಸುರಂಗ ಮಾರ್ಗದ ಸಮೀಕ್ಷೆಗೆ ಸಮಿತಿ ರಚನೆ

ಹಾಸನದಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್​​ನಲ್ಲಿ ರೈಲು- ರಸ್ತೆ ಸುರಂಗ ಮಾರ್ಗದ ಸಮೀಕ್ಷೆಗೆ ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಸಮಿತಿ ರಚನೆ ಮಾಡಿದೆ. ಈ ಯೋಜನೆಯ ಕಾರ್ಯಸಾಧ್ಯತೆಯನ್ನು ಸಮಿತಿ ಪರಿಶೀಲಿಸಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಜಂಟಿ ಕಾರ್ಯನಿರತ ತಂಡ ರಚನೆ ಮಾಡಲಾಗಿದೆ ಎಂದು ಬಿಜೆಪಿ ಸಂಸದ ಬ್ರಿಜೇಶ್ ಚೌಟ ಅವರಿಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಂದ ಮಾಹಿತಿ ಬಂದಿದೆ.

ಶಿರಾಡಿ ಘಾಟ್​​​ನಲ್ಲಿ ರೈಲು-ರೋಡ್ ಸುರಂಗ ಮಾರ್ಗದ ಸಮೀಕ್ಷೆಗೆ ಸಮಿತಿ ರಚನೆ
Bjp Mp Brijesh Chowta

Updated on: Nov 07, 2025 | 11:07 PM

ಮಂಗಳೂರು, ನವೆಂಬರ್ 7: ಮಂಗಳೂರು- ಬೆಂಗಳೂರು ಹೈಸ್ಪೀಡ್‌ ಕಾರಿಡಾರ್​​ಗೆ ಸಂಬಂಧಿಸಿದಂತೆ ಹಾಸನದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್​ನಲ್ಲಿ (Shiradi Ghat) ಸುರಂಗ ಮಾರ್ಗ ಸೇರಿದಂತೆ ರೈಲ್ವೇ ಮತ್ತು ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ಜಂಟಿ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

ಶಿರಾಡಿ ಘಾಟ್​​ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಜಂಟಿ ಸಮೀಕ್ಷೆಗೆ ಸಮಿತಿ ರಚಿಸಲು ಕೋರಿ ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿ: ಇನ್ನರ್ ರಿಂಗ್ ಮೆಟ್ರೋ ಯೋಜನೆ ಕೈಬಿಡಲು ಪ್ಲ್ಯಾನ್

ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಯೋಜನೆಯಡಿ ಶಿರಾಡಿ ಘಾಟ್​ನಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮಾರ್ಗ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳ ಸಹಭಾಗಿತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಕೇಂದ್ರ ಹೆದ್ದಾರಿ ಸಚಿವಾಲಯವು ತಜ್ಞರ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಿದೆ.

ಈ ತಜ್ಞರ ಸಮಿತಿಯು ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಮತ್ತು ರಸ್ತೆ ಸಂಪರ್ಕಿತ ಸುರಂಗ ಮಾರ್ಗದ ಸಾಧ್ಯತೆ ಹಾಗೂ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರ್‌ ಅವರು ಬ್ರಿಜೇಶ್ ಚೌಟ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇದೇ ನ 28ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ವಿಶೇಷತೆ ಏನು ಗೊತ್ತಾ?

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸದ ಬ್ರಿಜೇಶ್ ಚೌಟ, ಇದು ಬೆಂಗಳೂರು-ಮಂಗಳೂರು ಹೈಸ್ಪೀಡ್‌ ಕಾರಿಡಾರ್‌ ಯೋಜನೆಯ ಬಗೆಗಿನ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗುವ ಮೊದಲ ಹೆಜ್ಜೆಯಾಗಿದೆ. ಶಿರಾಡಿ ಘಾಟ್ ಪ್ರದೇಶದ ಪರಿಸರ ಸೂಕ್ಷ್ಮತೆ ಮತ್ತು ಭೌಗೋಳಿಕ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಈ ಭಾಗದಲ್ಲಿ ರಸ್ತೆ ಹಾಗೂ ರೈಲು ಹಳಿಗಳ ಅಭಿವೃದ್ದಿ ಕಾಮಗಾರಿಗೆ ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮೀಕ್ಷೆ ಕೈಗೊಳ್ಳಲು ಮತ್ತು ಡಿಪಿಆರ್ ಮೇಲ್ವೀಚಾರಣೆಗೆ ತಜ್ಞರ ಸಮಿತಿ ನೇಮಿಸುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ