ಪುತ್ತೂರಿನಲ್ಲಿ ನೈತಿಕ ಪೊಲೀಸ್ ಗಿರಿ; ಹಿಂದೂ ಯುವತಿ ಜೊತೆ ಮಾತನಾಡಿದ ಮುಸ್ಲಿಂ ಯುವಕನಿಗೆ ಥಳಿತ
ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಪುತ್ತೂರಿನಲ್ಲಿ ಯುವತಿಯೊಂದಿಗೆ ಮಾತನಾಡಿದ ಮುಸ್ಲಿಂ ಯುವಕನೋರ್ವನಿಗೆ ಥಳಿಸಿದ ಘಟನೆ ನಡೆದಿದೆ.
ಮಂಗಳೂರು: ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂದು ಪುತ್ತೂರು (Puttur) ತಾಲೂಕಿನಲ್ಲಿ ಹಿಂದೂ ಯುವತಿಯೊಂದಿಗೆ ಮಾತನಾಡಿದ ಮುಸ್ಲಿಂ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ನಡೆದಿದೆ. ಮಹಮ್ಮದ್ ಫಾರಿಶ್ (18) ಥಳಿತಕ್ಕೊಳಗಾದ ಯುವಕನಾಗಿದ್ದಾನೆ.
ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿ ಕೆ.ಇಬ್ರಾಹಿಂ ಅವರ ದ್ವಿತೀಯ ಪುತ್ರನಾಗಿರುವ ಮಹಮ್ಮದ್ ಫಾರಿಶ್, ಹಿಂದೂ ಯುವತಿಯೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಸ್ಥಳೀಯ ಗುಂಪೊಂದು ಮಹಮ್ಮದ್ ಫಾರಿಶ್ನನ್ನು ಪ್ರಶ್ನಿಸಿ ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. ಸದ್ಯ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಹಮ್ಮದ್ ಫಾರಿಶ್ನಿಂದ ಮಾಹಿತಿ ಕಲೆಹಾಕಿದ್ದಾರೆ.
ಇದನ್ನೂ ಓದಿ: ಮೇ.03 ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಬದಲಿ ಸಂಚಾರ ವ್ಯವಸ್ಥೆ
ಇತ್ತೀಚೆಗಷ್ಟೇ ಹಿಂದೂ ಹುಡುಗಿಯೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿತ್ತು. ವಿದ್ಯಾರ್ಥಿನಿಯೊಂದಿಗೆ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿಯಿದ್ದು, ಕುಕ್ಕೆ ಸುಬ್ರಹ್ಮಣ್ಯ ಬಸ್ಸ್ಟ್ಯಾಂಡ್ನಲ್ಲಿ ಈ ಜೋಡಿ ಕಂಡು ಬಂದಿದೆ. ಬಳಿಕ ಕುಮಾರಧಾರ ಬಳಿ ಬಂದಾಗ ಗುಂಪೊಂದು ಯುವಕನಿಗೆ ಥಳಿಸಿದ್ದಾರೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಅನ್ವಯ ಯುವಕನ ವಿರುದ್ದ ಸುಬ್ರಹ್ಮಣ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ