Norovirus: ಕೇರಳದಲ್ಲಿ ನೊರೊವೈರಸ್ ಹಾವಳಿ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 23, 2021 | 11:14 PM

ನೊರೊವೈರಸ್ ಸೋಂಕಿಗೆ ನಿರ್ದಿಷ್ಟ ಲಕ್ಷಣ ಇಲ್ಲದಿದ್ದರೂ ಅತಿಸಾರ ಹಾಗೂ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರವು ಸೂಚಿಸಿದೆ.

Norovirus: ಕೇರಳದಲ್ಲಿ ನೊರೊವೈರಸ್ ಹಾವಳಿ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕೇರಳದಲ್ಲಿ ನೊರೊವೈರಸ್ ಸೋಂಕು ಕಾಣಿಸಿಕೊಂಡಿದೆ.
Follow us on

ಬೆಂಗಳೂರು: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನೊರೊವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲು ಆರೋಗ್ಯ ಇಲಾಖೆಯು ಜಿಲ್ಲಾ ವೈದ್ಯಾಧಿಕಾರಿಗಳಿಗೆ (ಡಿಎಚ್​ಒ) ಸೂಚನೆ ನೀಡಿದೆ. ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ನೂರೊವೈರಸ್‌ ಸೋಂಕಿನಿಂದ ಕಾಲರಾದಂತೆ ಅತಿಸಾರವಾಗಿ, ದೇಹವು ತೀವ್ರ ನಿರ್ಜಲೀಕರಣದಿಂದ ಬಳಲುತ್ತದೆ. ನೊರೊವೈರಸ್ ಸೋಂಕಿಗೆ ನಿರ್ದಿಷ್ಟ ಲಕ್ಷಣ ಇಲ್ಲದಿದ್ದರೂ ಅತಿಸಾರ ಹಾಗೂ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಸೋಂಕಿನ ಬಗ್ಗೆ ಗಮನಿಸಲು ಜಿಲ್ಲೆಗೆ ಒಬ್ಬ ವೈದ್ಯರನ್ನು ನೇಮಕ ಮಾಡಿ ನಿರ್ವಹಣೆಗೆ ಗಮನ ಹರಿಸಬೇಕು. ವೈದ್ಯರ ಹೆಸರನ್ನು ಸಹ ಆರೋಗ್ಯ ಇಲಾಖೆಯ ನಿರ್ದೇಶಕರ ಗಮನಕ್ಕೆ ತರಬೇಕು ಎಂದು ಸರ್ಕಾರವು ಸೂಚಿಸಿದೆ.

ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಬೇಕು. ಪರೀಕ್ಷೆಗೆ ಒಳಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸೋಂಕಿತರು, ಸಂಪರ್ಕಿತರು ಬಳಸಿದ ವಸ್ತುಗಳನ್ನು ಬಳಸಬಾರದು. ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಬಿಸಿನೀರು ಬಳಕೆಗೆ ಸೂಚನೆ ನೀಡಬೇಕು. ತೆರೆದ ಬಾವಿ, ಕೆರೆ ನೀರನ್ನು ಶುದ್ಧೀಕರಿಸಿಯೇ ಬಳಸಬೇಕು. ಸಂಶಯಾಸ್ಪದ ಪ್ರಕರಣ ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

ಕೇರಳದ ವಯಾನಾಡಿನಲ್ಲಿ 13 ಜನರಲ್ಲಿ ನೂರೊವೈರಸ್ ಸೋಂಕು ಕಾಣಿಸಿಕೊಂಡಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಆಚರಣೆಗೆ ತರಬೇಕೆಂದು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿನ ಮುಖ್ಯ ಅಂಶಗಳು ಇವು.

1. ನೂರೋ ವೈರಸ್ ಕಾಯಿಲೆಯು ಕಾಲರಾದಂತೆ ಅತಿಸಾರ ಮತ್ತು ತೀವ್ರ ನಿರ್ಜಲೀಕರಣ ಆಗಿರುತ್ತದೆ. ಅತಿಸಾರ ಬೇಧಿಗೆ ನೀಡುವ ಚಿಕಿತ್ಸೆ ನೀಡಬೇಕು
2. ಈ ವೈರಸ್ ನಾನ್ ಸ್ಪೆಸಿಫಿಕ್ ಆಗಿದ್ದು ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು
3. ಜಿಲ್ಲೆಗೆ ಒಬ್ಬ ಪಿಸಿಷಿಯನ್ ನೇಮಕ ಮಾಡಿ ಸೂಕ್ತ ನಿರ್ವಹಣೆ ಮಾಡುವುದು. ಸದರಿ ಅವರ ಹೆಸರು ಕೂಡ ನಿರ್ದೇಶಕರ ಗಮನಕ್ಕೆ ತರುವುದು
4. ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸುವುದು. ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು. ಕುಡಿಯಲು ಯೊಗ್ಯವಿಲ್ಲವೆಂದು ದೃಢೀಕರಿಸಿದರೆ ಕ್ಲೋರಿನೇಷನ್ ಮಾಡಿಸುವುದು
5. ಕುಡಿಯುವ ನೀರನ್ನು ಕಲುಷಿತಗೊಳಿಸುವ, ಕುಡಿಯುವ ನೀರಿನ ಪೂರೈಕೆಯಲ್ಲಿನ ದೋಷಗಳನ್ನು ಸ್ಥಳೀಯ ಸಂಸ್ಥೆಗಳು ಸರಿಪಡಿಸುವುದು. ಕುಡಿಯುವ ನೀರಿನ ಪೈಪುಗಳು ಚರಂಡಿ ಮೂಲಕ ಹಾದು ಹೋಗದಂತೆ ಕ್ರಮ ವಹಿಸುವುದು
6. ರಸ್ತೆಬದಿಗಳಲ್ಲಿ ಮಾರುವ ತಿನಿಸು, ಹಣ್ಣು ಹಂಪಲುಗಳನ್ನು ತಿನ್ನದಂತೆ ಜಾಗೃತಗೊಳಿಸಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು
7. ಸೊಂಕಿತ ವ್ಯಕ್ತಿಗಳ ನೇರ ಸಂಪರ್ಕ ಮತ್ತು ಸೊಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಸಂಸ್ಕರಿಸದೆ ಬಳಸದಂತೆ ತಿಳಿಸುವುದು
8. ಸಂಶಯಾಸ್ಪದ ಪ್ರದೇಶದ ಹೊಟೆಲ್ ಮತ್ತು ಕ್ಯಾಂಟೀನ್​ಗಳಲ್ಲಿ ಬಿಸಿನೀರು ಬಳಸಲು ಸೂಚಿಸುವುದು
9. ತೆರೆದ ಬಾವಿ ಮತ್ತು ಕೆರೆ ಕುಂಟೆಗಳ ನೀರನ್ನು ಗೃಹೋಪಯೋಗಕ್ಕೆ ಬಳಸಿದರೆ ಕ್ಲೋರೇನೆಷನ್ ಮಾಡಿಯೇ ಬಳಸಬೇಕು
10. ಜಿಲ್ಲೆಗಳಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ನಿರ್ದೇಶಕರ ಗಮನಕ್ಕೆ ತರುವುದು

ಇದನ್ನೂ ಓದಿ: Norovirus ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ: ಏನಿದರ ರೋಗಲಕ್ಷಣ, ತಡೆಗಟ್ಟುವ ಕ್ರಮಗಳೇನು?
ಇದನ್ನೂ ಓದಿ: Norovirus: ಮಕ್ಕಳು ಮತ್ತು ವೃದ್ಧರಿಗೆ ಶುರುವಾಯ್ತು ನೊರೊವೈರಸ್​ ಭಯ; ದೇಹವನ್ನು ಬಳಲಿಸುವ ಈ ಕಾಯಿಲೆ ಬಗ್ಗೆ ಇರಲಿ ನಿಗಾ

Published On - 11:13 pm, Tue, 23 November 21