ಮಂಗಳೂರು: ಅಕ್ಷರ ಸಂತನ ಭೇಟಿಯಾದ ವೃಕ್ಷಮಾತೆ! ಹರೇಕಳ ಹಾಜಬ್ಬ, ತುಳಸಿಗೌಡ ಸಮಾಗಮ

| Updated By: ganapathi bhat

Updated on: Nov 13, 2021 | 3:16 PM

Mangaluru News: ದೆಹಲಿಯಿಂದ ಬರುವಾಗಲೇ ತುಳಸಿ ಗೌಡ, ಹರೇಕಳ ಹಾಜಬ್ಬ ತೆರೆದಿರುವ ಶಾಲೆ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಹರೇಕಳ ಹಾಜಬ್ಬರ ಶಾಲೆ ಮತ್ತು ಮನೆಗೆ ತುಳಸಿಗೌಡ ಭೇಟಿ ನೀಡಿದ್ದಾರೆ.

ಮಂಗಳೂರು: ಅಕ್ಷರ ಸಂತನ ಭೇಟಿಯಾದ ವೃಕ್ಷಮಾತೆ! ಹರೇಕಳ ಹಾಜಬ್ಬ, ತುಳಸಿಗೌಡ ಸಮಾಗಮ
ಹರೇಕಳ ಹಾಜಬ್ಬ, ತುಳಸಿ ಗೌಡ
Follow us on

ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮತ್ತೋರ್ವ ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಇಂದು (ನವೆಂಬರ್ 13) ಮಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಪದ್ಮಶ್ರೀ ತುಳಸಿ ಗೌಡರಿಂದ ಪದ್ಮಶ್ರೀ ಹರೇಕಳ ಹಾಜಬ್ಬ ಭೇಟಿ ಜನರಲ್ಲಿ ಕುತೂಹಲ ಮತ್ತು ಸಂತಸ ಮೂಡಿಸಿದೆ. ಮಂಗಳೂರು ಹೊರವಲಯದ ಹಾಜಬ್ಬನವರ ಮನೆಯಲ್ಲಿ ಭೇಟಿ ಮಾಡಿದ್ದಾರೆ. ಪದ್ಮಶ್ರೀ ಪುರಸ್ಕೃತ ಸಾಧಕರ ಸಮಾಗಮ ನಡೆದಿದೆ.

ದೆಹಲಿಯಿಂದ ಬರುವಾಗಲೇ ತುಳಸಿ ಗೌಡ, ಹರೇಕಳ ಹಾಜಬ್ಬ ತೆರೆದಿರುವ ಶಾಲೆ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಹರೇಕಳ ಹಾಜಬ್ಬರ ಶಾಲೆ ಮತ್ತು ಮನೆಗೆ ತುಳಸಿಗೌಡ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ. ಪಿಯು ಕಾಲೇಜು ತೆರೆಯಲು ಹಾಜಬ್ಬರಿಗೆ ಆರ್ಥಿಕ ನೆರವು ನೀಡಿದ್ದಾರೆ. ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಆರ್ಥಿಕ ನೆರವು ನೀಡಿದ್ದಾರೆ. ಹರೇಕಳ ಹಾಜಬ್ಬರವರ ಸಾಹಸ ಕೊಂಡಾಡಿದ್ದಾರೆ.

ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ ಅಕ್ಷರ ಸಂತ ಹಾಜಬ್ಬ
ದುಬಾರಿ ಹಣ ಕೊಟ್ಟು ಶಿಕ್ಷಣ ಕಲಿಯಲು ಸಾಧ್ಯವಾಗದ ಬಡ ಮಕ್ಕಳಿಗೆಂದು ತಮ್ಮೂರಲ್ಲಿ ಶಾಲೆಯೊಂದನ್ನು ಆರಂಭಿಸಬೇಕೆಂದು ಹಾಜಬ್ಬ ನಿರ್ಧರಿಸಿದರು. ಅದಕ್ಕಾಗಿ ಹಾಜಬ್ಬ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಬಿಇಓ ಕಚೇರಿಗೆ ಅಲೆದಾಡಿದರು. ಹಣ್ಣಿನ ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಓಡಾಡಿದ ಹಾಜಬ್ಬನವರಿಗೆ ಶಾಲೆಯನ್ನು ಆರಂಭಿಸಲು ಅನುಮತಿ ದೊರೆಯಲಿಲ್ಲ, ಹಣ್ಣಿನ ಮಾರಾಟದಿಂದ ಬರುತ್ತಿದ್ದ ಹಣವೂ ಇಲ್ಲದಂತಾಯಿತು. ಆದರೂ ಧೃತಿಗೆಡದ ಹಾಜಬ್ಬನವರ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು, 1999ರ ಜೂ.6ರಂದು ನ್ಯೂಪಡ್ಪು ಗ್ರಾಮದ ಮದರಸಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದ್ದರು.

ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂ. ಹಿಡಿದುಕೊಂಡು ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. ಬಳಿಕ 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಆಗ ಶಾಸಕರಾಗಿದ್ದ ಯು.ಟಿ. ಖಾದರ್‌ ಆ ಊರಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಹೀಗೆ ಹರೇಕಳದಲ್ಲಿ ಶಾಲೆಯೊಂದು ತಲೆ ಎತ್ತಿತು.

1.25 ಪೈಸೆ ದಿನಗೂಲಿಯಲ್ಲಿ ದುಡಿದವರು ತುಳಸಿ ಗೌಡ
ತುಳಸಿ ಗೌಡ ಅರಣ್ಯ ಇಲಾಖೆಯಿಂದ ಬೀಜಗಳನ್ನು ಶೇಖರಣೆ ಮಾಡಿ, ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಕೇವಲ 1.25 ಪೈಸೆ ದಿನದ ಕೂಲಿಯಲ್ಲಿ ಬಹಳ ಖುಷಿಯಿಂದ ಮಾಡುತ್ತಿದ್ದರು. ಎಲ್ಲರೂ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಅಂದರೂ ಇವರ ಪರಿಸರ ಕಾಳಜಿಯಿಂದ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಇವರು ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ, ನೆರಳನ್ನು ನೀಡುತ್ತಿವೆ. ಪರಿಸರದ ಮೇಲಿನ ಈಕೆಯ ಪ್ರೀತಿಯನ್ನು ಕಂಡು ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ.ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟಿ ಅರಣ್ಯವಲಯದಲ್ಲಿ ಸಸಿಗಳನ್ನು ಪೋಷಿಸುವ ಕೆಲಸವನ್ನು ಸಹ ಕೊಡಿಸಿದರು.

ಇದನ್ನೂ ಓದಿ: ಬರಿಗಾಲಲ್ಲೇ ತೆರಳಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ; ಅಕ್ಷರ ಸಂತನ ಸರಳತೆ ಕಂಡು ರಾಷ್ಟ್ರಪತಿಗೂ ಅಚ್ಚರಿ

ಇದನ್ನೂ ಓದಿ: Tulasi Gowda: ರಾಷ್ಟ್ರಪತಿಯಿಂದ ಪದ್ಮಶ್ರೀ ಸ್ವೀಕರಿಸಿದ ಅಂಕೋಲಾದ ಹೆಮ್ಮೆ; ವೃಕ್ಷಮಾತೆ ತುಳಸಿ ಗೌಡ ಪ್ರಧಾನಿ ಮೋದಿ ಕೈಕುಲುಕಿದ ಆ ಘಳಿಗೆ

Published On - 3:04 pm, Sat, 13 November 21